Kannada NewsLatest

ಪ್ರವಾಹ ಪರಿಹಾರ ಕೂಡಲೇ ಕಲ್ಪಿಸಿಕೊಡಿ: ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಪ್ರಗತಿವಾಹಿನಿ ಸುದ್ದಿ; ಗೋಕಾಕ್ : ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಧನವನ್ನು ವಿತರಿಸುವಂತೆ ಕೆಎಂಎಫ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರವಿವಾರ ರಾತ್ರಿ ತಮ್ಮ ಗೃಹ ಕಛೇರಿ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ಅಧಿಕಾರಿಗಳ ಸಭೆ ನಡೆಸಿದ ಅವರು, ನದಿ ತೀರದ ಸಂತ್ರಸ್ತ ಕುಟುಂಬಗಳಿಗೆ ಬೇಗನೇ ಪರಿಹಾರ ವಿತರಿಸುವ ಕೆಲಸ ಮಾಡುವಂತೆ ಸೂಚಿಸಿದರು.

ಪ್ರಸಕ್ತ ಸಾಲಿನಲ್ಲಿ ಪ್ರವಾಹ ಹಾಗೂ ನಿರಂತರ ಮಳೆಯಿಂದ ಅರಭಾವಿ ಕ್ಷೇತ್ರಕ್ಕೆ ಒಳಪಡುವ ಘಟಪ್ರಭಾ ನದಿ ತೀರದ ಗ್ರಾಮಗಳಲ್ಲಿ ಸಾಕಷ್ಟು ಹಾನಿಯಾಗಿದೆ. ಮನೆಗಳು ಕುಸಿದು ಬಿದ್ದಿವೆ. ಇದರಿಂದ ಸಂತ್ರಸ್ತ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ. ಇದರ ಜೊತೆಗೆ ಬೆಳೆಗಳು ಕೂಡ ಸಾಕಷ್ಟು ಪ್ರಮಾಣದಲ್ಲಿ ನಾಶವಾಗಿವೆ. ಕೂಡಲೇ ಸಮೀಕ್ಷೆ ಕಾರ್ಯವನ್ನು ಚುರುಕಾಗಿ ಮಾಡಬೇಕು. ನಿಜವಾದ ಫಲಾನುಭವಿಗಳನ್ನು ಗುರುತಿಸಬೇಕು. ಯಾರ ಒತ್ತಡಕ್ಕೂ ಮಣಿಯದೇ ಅರ್ಹರಿಗೆ ಸರ್ಕಾರದ ಪರಿಹಾರವನ್ನು ಮುಟ್ಟಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕೆಂದು ಅವರು ಸೂಚನೆ ನೀಡಿದರು.

ಈಗಾಗಲೇ ಕೆಲ ಫಲಾನುಭವಿಗಳಿಗೆ ತಾತ್ಕಾಲಿಕ ರೂ. ೧೦ ಸಾವಿರ ಮುಟ್ಟಿರುವುದಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ ಸಂತ್ರಸ್ತ ಕುಟುಂಬಗಳಿಗೆ ಹತ್ತು ಸಾವಿರ ರೂ. ಪರಿಹಾರವನ್ನು ನೀಡಬೇಕು. ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೀಡಾಗಿರುವ ರಸ್ತೆಗಳು, ಸೇತುವೆಗಳು, ಶಾಲಾ ಹಾಗೂ ಅಂಗನವಾಡಿ ಸೇರಿದಂತೆ ಇತರೇ ಸರ್ಕಾರಿ ಕಟ್ಟಡಗಳ ಕುರಿತು ಕೂಡಲೇ ವರದಿ ನೀಡಬೇಕು. ಅಧಿಕಾರಿಗಳು ಸಂತ್ರಸ್ತ ಕುಟುಂಬಗಳ ನೆರವಿಗೆ ಧಾವಿಸುವಂತೆ ಸೂಚಿಸಿದರು.

ಬೆಳೆಗಳು ನಾಶವಾಗಿದ್ದು ಗೋಕಾಕ ತಾಲೂಕಿನ 7250 ಎಕರೆ ಹಾಗೂ ಮೂಡಲಗಿ ತಾಲೂಕಿನ 7875 ಎಕರೆ ಪ್ರದೇಶವು ಹಾನಿಗೀಡಾಗಿದೆ. ಇದರಲ್ಲಿ ಗೋಕಾಕ ತಾಲೂಕಿನಲ್ಲಿ 32 ಹಾಗೂ ಮೂಡಲಗಿ ತಾಲೂಕಿನ 22 ಗ್ರಾಮಗಳಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. ನೀರಾವರಿ ಹೊಂದಿರುವ ಬೆಳೆಗಳಿಗೆ ಪ್ರತಿ ಹೆಕ್ಟರ್‌ಗೆ 13500 ರೂ. ಮತ್ತು ಒಣಬೇಸಾಯ ಜಮೀನುಗಳಿಗೆ ಪ್ರತಿ ಹೆಕ್ಟರ್‌ಗೆ 6,800 ರೂ. ಪರಿಹಾರ ವಿತರಿಸಲು ಸರ್ಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಹಾನಿಗೀಡಾಗಿರುವ ರೈತರೊಬ್ಬರಿಗೆ ಗರಿಷ್ಟ 5 ಎಕರೆವರೆಗೆ ಪರಿಹಾರ ನೀಡಬೇಕೆನ್ನುವ ಸುತ್ತೋಲೆ ಬಂದಿರುವ ಹಿನ್ನೆಲೆಯಲ್ಲಿ ಪ್ರವಾಹದಿಂದ ಹಾನಿಗೀಡಾಗಿರುವ ರೈತರಿಗೆ ಕೂಡಲೇ ಪರಿಹಾರ ಮೊತ್ತವನ್ನು ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲ್ದಾರ ಡಿ.ಜೆ. ಮಹಾತ, ಗೋಕಾಕ ತಾಪಂ ಸಹಾಯಕ ನಿರ್ದೇಶಕ ಆರ್.ಎ. ದೇಸಾಯಿ, ಮೂಡಲಗಿ ತಾಪಂ ಸಹಾಯಕ ನಿರ್ದೇಶಕ ಸಂಗಮೇಶ ರೊಡ್ಡನವರ ಸೇರಿದಂತೆ ಇತರೇ ತಾಲೂಕಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಮಟ್ಟದ ವಾರ್ಷಿಕ ದತ್ತಿ ನಿಧಿ ಪ್ರಶಸ್ತಿ ಪ್ರಕಟ  

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button