ಪ್ರಗತಿವಾಹಿನಿ ಸುದ್ದಿ, ಮೂಡಲಗಿ :
ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವವರನ್ನು ನಂಬಿ. ಪೊಳ್ಳು ಭಾಷಣದಿಂದ ಜನರನ್ನು ದಿಕ್ಕು ತಪ್ಪಿಸುತ್ತಿರುವವರನ್ನು ಯಾವುದೇ ಕಾರಣಕ್ಕೂ ನಂಬಬೇಡಿ. ಪೊಳ್ಳು ಭಾಷಣಕಾರರಿಂದ ಏನನ್ನೂ ಸಾಧಿಸಲು ಆಗದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿಗೆ ಸಮೀಪದ ಧರ್ಮಟ್ಟಿ ಗ್ರಾಮದಲ್ಲಿ ನಡೆದ ವಿವಿಧ ಅಭಿವೃದ್ಧಿಪರ ಕಾಮಗಾರಿಗಳನ್ನು ನೆರವೇರಿಸಿ ಮಾತನಾಡಿದ ಅವರು, ಗ್ರಾಮದ ಅಭಿವೃದ್ಧಿಗೆ ದುಡಿಯುವವನು ನಾನು. ಆದರೆ, ಬೇರೆಯವರಿಗೆ ಏಕೆ ಸಂಬಳ ನೀಡುತ್ತೀರಿ? ಎಂದು ಗ್ರಾಮಸ್ಥರನ್ನು ಪ್ರಶ್ನಿಸಿದ ಅವರು, ದುಡಿಯುತ್ತಿರುವವರನ್ನು ಎಂದಿಗೂ ಮರೆಯಬೇಡಿ ಎಂದು ಹೇಳಿದರು.
೧೯೯೨ ರಿಂದ ಅರಭಾವಿ ಕ್ಷೇತ್ರಾದ್ಯಂತ ಕೆಲಸ ಮಾಡುತ್ತ ಈ ಭಾಗದ ಅಭಿವೃದ್ಧಿಗೆ ಶ್ರಮಿಸುತ್ತಿರುವೆ. ಅದರಲ್ಲೂ ಧರ್ಮಟ್ಟಿ ಗ್ರಾಮ ನನಗೆ ಮನೆ ಇದ್ದಂತೆ. ಈಗಿನ ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ ಅವರೊಂದಿಗೆ ಕೂಡಿಕೊಂಡು ಈ ಭಾಗದಲ್ಲಿ ದೊಡ್ಡಮಟ್ಟದ ಸಂಘಟನೆಯನ್ನು ಅಂದಿನ ದಿನಗಳಲ್ಲಿ ನಾವು ಮಾಡಿದ್ದೆವು. ಆದರೆ ಕಳೆದ ಚುನಾವಣೆಯಲ್ಲಿ ನಮಗೆ ನಿರೀಕ್ಷಿತ ಪ್ರಮಾಣದಲ್ಲಿ ಮತ ಬಂದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಈಗಾಗಲೇ ಧರ್ಮಟ್ಟಿ ಗ್ರಾಮದ ವಿಕಾಸಕ್ಕೆ ಸುವರ್ಣ ಗ್ರಾಮೋದಯ ಯೋಜನೆ, ಎಸ್‌ಸಿಪಿ ಕಾಮಗಾರಿ, ರಸ್ತೆಗಳ ನಿರ್ಮಾಣ, ಶಾಲಾ ಕೊಠಡಿಗಳ ನಿರ್ಮಾಣ, ದೇವಸ್ಥಾನಗಳ ಜೀರ್ಣೋದ್ಧಾರ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ರಸ್ತೆ ನಿರ್ಮಾಣಕ್ಕೆ ೧.೨೦ ಕೋಟಿ ರೂ. :
ಮೂಡಲಗಿಯಿಂದ ಮಸಗುಪ್ಪಿವರೆಗೆ ರಸ್ತೆ ಸುಧಾರಣೆಗೆ ನಬಾರ್ಡ ಯೋಜನೆಯಡಿ ೧.೨೦ ಕೋಟಿ ರೂ.ಗಳ ಮಂಜೂರಾತಿಗಾಗಿ ಪಂಚಾಯತ ರಾಜ್ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೂರು ತಿಂಗಳೊಳಗೆ ಕಾಮಗಾರಿಗೆ ಅನುಮೋದನೆ ದೊರೆಯಲಿದೆ. ಮಸಗುಪ್ಪಿ-ಮೂಡಲಗಿ ರಸ್ತೆಯ ಧರ್ಮಟ್ಟಿ ಗ್ರಾಮದ ಹಳ್ಳದ ಸೇತುವೆ ದುರಸ್ತಿ ಮತ್ತು ರಸ್ತೆ ಕಾಮಗಾರಿಗೆ ಒಟ್ಟು ೧ ಕೋಟಿ ರೂ.ಗಳ ಮಂಜೂರಾತಿಗಾಗಿ ಈಗಾಗಲೇ ಜಲಸಂಪನ್ಮೂಲ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿಗೆ ಅನುಮೋದನೆ ದೊರೆಯಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಗುಂಪುಗಾರಿಕೆ ಮಾಡಬೇಡಿ:
ಗ್ರಾಮದ ಅಭಿವೃದ್ಧಿಯಲ್ಲಿ ಎಂದಿಗೂ ಗುಂಪುಗಾರಿಕೆ ಮಾಡಬೇಡಿ. ಇದರಿಂದ ಗ್ರಾಮ ಅಭಿವೃದ್ಧಿಯಾಗುವುದಿಲ್ಲ. ಒಂದಾಗಿ-ಒಗ್ಗಟ್ಟಾಗಿ ದುಡಿದರೆ ಮಾತ್ರ ಗ್ರಾಮವು ಅಭಿವೃದ್ಧಿಯಾಗುತ್ತದೆ. ಸರ್ಕಾರದ ಯೋಜನೆಗಳನ್ನು ಒಗ್ಗಟ್ಟಾಗಿ ಪಡೆದರೆ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವೆಂದು ಹೇಳಿದರು.
ಉದ್ಘಾಟನೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ೨೦೧೭-೧೮ನೇ ಸಾಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ೧೦ ಲಕ್ಷ ರೂ. ವೆಚ್ಚದ ಕನಕ ಭವನ, ೧೨ ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡವನ್ನು ಉದ್ಘಾಟಿಸಿದರು.
ದಲಿತ ಸಂಘರ್ಷ ಸಮಿತಿಯ ನಾಮಫಲಕವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅನಾವರಣ ಮಾಡಿದರು.
ಜಿಲ್ಲಾ ಪಂಚಾಯತ ಸದಸ್ಯೆ ವಾಸಂತಿ ತೇರದಾಳ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ತಾಪಂ ಸದಸ್ಯೆ ಪ್ರೇಮಾ ಸನದಿ, ಮುಖಂಡ ಬಿ.ಬಿ. ಪೂಜೇರಿ, ಪಿಕೆಪಿಎಸ್ ಅಧ್ಯಕ್ಷ ಪರಶುರಾಮ ಸನದಿ, ಗ್ರಾಪಂ ಉಪಾಧ್ಯಕ್ಷೆ ಸುವರ್ಣಾ ತೆಳಗಡೆ, ಸುರೇಶ ಪೂಜೇರಿ, ದಲಿತ ಮುಖಂಡ ಲಕ್ಷ್ಮಣ ತೆಳಗಡೆ, ಲಕ್ಕಪ್ಪ ತೆಳಗಡೆ, ಮೂಡಲಗಿ ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ, ಡಾ.ಶಿವಾನಂದ ವಾಗುಲೆ, ಲಕ್ಷ್ಮಣ ಕೊರಕಪೂಜೇರಿ, ಗ್ರಾಪಂ ಮಾಜಿ ಅಧ್ಯಕ್ಷ ಹನಮಂತ ಕನಕಿಕೋಡಿ, ಲಗಮನ್ನಾ ಕುಟ್ರಿ, ಮಹಾದೇವ ಬಡ್ಡಿ, ನಿಂಗಪ್ಪ ಗೊಡಚಿ, ಬಸವರಾಜ ತುಂಬೂಚಿ, ಸಂಜು ಹೊಸಕೋಟಿ, ಶ್ರೀಕಾಂತ ಮುತಾಲಿಕದೇಸಾಯಿ, ಪ್ರಭಾಶುಗರ ನಿರ್ದೇಶಕ ಮಲ್ಲಿಕಾರ್ಜುನ ಕಬ್ಬೂರ, ಮೂಡಲಗಿ ಪುರಸಭೆ ಸದಸ್ಯ ಹನಮಂತ ಗುಡ್ಲಮನಿ, ಅನ್ವರ ನದಾಫ, ಜಿಪಂ ಎಇ ಸುರೇಶ, ಗುತ್ತಿಗೆದಾರ ಲಕ್ಷ್ಮಣ ಗಡಾದ, ಸದಾಶಿವ ಹಳ್ಳೂರ, ಬನಪ್ಪ ಕೊರಕಪೂಜೇರಿ, ನಾಗಪ್ಪ ಬಾಪುಕುರಿ, ಗ್ರಾಪಂ ಮತ್ತು ಪಿಕೆಪಿಎಸ್ ಸದಸ್ಯರು ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಧರ್ಮಟ್ಟಿ ಪಿಕೆಪಿಎಸ್ ಮುಖ್ಯ ಕಾರ್ಯನಿರ್ವಾಹಕ ವಿಠ್ಠಲ ಮನಗುದ್ಲಿ ಸೇವೆಯಿಂದ ನಿವೃತ್ತಗೊಂಡ ಹಿನ್ನೆಲೆಯಲ್ಲಿ ಅವರನ್ನು ಗಣ್ಯರು ಸತ್ಕರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ