ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕೊರೊನಾದಿಂದಾಗಿ ಲಾಕ್ ಡೌನ್ ಸಂಕಷ್ಟಕ್ಕೆ ಸಿಲುಕಿರುವ ಹಲವಾರು ಸಮುದಾಯಗಳಲ್ಲಿ ಬಲಿಜ ಸಮುದಾಯವು ಒಂದು. ರಾಜ್ಯದಲ್ಲಿ ಸಾವಿರಾರು ಬಲಿಜರು ತಮ್ಮ ಕುಲ ವೃತ್ತಿ ಬಳೆ ವ್ಯಾಪಾರ, ಹೂವಿನ ವ್ಯಾಪಾರ, ದಾಸ ವೃತ್ತಿ ಜೊತೆಗೆ ಗ್ರಂಧಿಗೆ ಅಂಗಡಿಗಳನ್ನು ಇಟ್ಟುಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ.
ಕಳೆದ ಮೂರು ತಿಂಗಳಿನಿಂದ ರಾಜ್ಯಕ್ಕೆ ಆವರಿಸಿರುವ ಕೊರೊನಾದಿಂದಾಗಿ ಬಲಿಜ ಸಮುದಾಯದ ಜೀವನ ದುಸ್ತರ ಸ್ಥಿತಿಗೆ ತಲುಪಿದೆ. ರಾಜ್ಯದ ತುಂಬಾ ಪಸರಿಸಿರುವ ಈ ಸಾಮುದಾಯ ತಮ್ಮ ಕುಲ ವೃತ್ತಿಯನ್ನು ಚಾಚುತಪ್ಪದೆ ಮಾಡಿಕೊಂಡು ಬರುತ್ತಿವೆ. ಕೊರೊನಾ ಹೊಡೆತ ಇವರ ಹೊಟ್ಟೆಯ ಮೇಲೆ ಬರೆ ಎಳೆದಿದೆ. ಬದುಕು ಅತಂತ್ರದ ಸ್ಥಿತಿಗೆ ಬಂದು ತಲುಪಿದೆ. ಸಣ್ಣಪುಟ್ಟ ವೃತ್ತಿ ನಿರ್ವಹಿಸುವ ಇವರು ಇಂತಹ ಸಂದಿಗ್ಧ ಸಮಯದಲ್ಲಿ ತಮ್ಮ ಸಮಸ್ಯೆಯನ್ನು ಸರ್ಕಾರದ ಮಟ್ಟದಲ್ಲಿ ಅಳಲು ತೊಡಿಕೊಂಡರೂ ತಮ್ಮ ಪರಿಸ್ಥಿತಿಯನ್ನು ಯಾರು ಕೇಳುತ್ತಾರೆ ಎನ್ನುವ ಪ್ರಶ್ನೆ ಇವರನ್ನು ಕಾಡುತ್ತಿದೆ.
ಜೀವನ ನಿರ್ವಹಣೆಗಾಗಿ ಗತಕಾಲದಿಂದ ಮಾಡಿಕೊಂಡು ಬಂದ ಬಲಿಜ ಸಮುದಾಯದ ವೃತ್ತಿ ಮುಂದಿನ ಪೀಳಿಗೆ ಹೇಗೆ ಪಸರಿಸಬೇಕು ಎಂಬ ಆತಂಕ ಈ ಸಮುದಾಯದ ಜನರು ವ್ಯಕ್ತಪಡಿಸುತ್ತಾರೆ. ಕೆ.ಆರ್.ಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೂಡ ಮೂವತ್ತೈದು ಸಾವಿರಕ್ಕೂ ಅಧಿಕ ಪ್ರಮಾಣದಲ್ಲಿ ಬಲಿಜ ಜನಾಂಗವಿದೆ. ಬಲಿಜ ಜನಾಂಗದವರನ್ನು ಗಂಧೂಡಿ ಎಂದು ಕೂಡ ಕರೆಯಲಾಗುತ್ತದೆ.
ಈ ಜನಾಂಗದ ಸಾರ್ವಜನಿಕರು ಕೆ.ಆರ್.ಪುರ ಸಂತೆ ಮೈದಾನದ ಸುತ್ತಮುತ್ತಲಿನ ಪ್ರದೇಶ, ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ವಿನಾಯಕ ದೇವಸ್ಥಾನದ ಬಳಿ ಹಾಗೂ ಕುಂಬಾರ ಬೀದಿ, ಹಳೆಯ ಪೋಲಿಸ್ ಠಾಣೆ ರಸ್ತೆ ಮುಂತಾದ ಕಡೆಗಳಲ್ಲಿ ನೂರಾರು ಕುಟುಂಬಗಳು ಬಳೆ ಅಂಗಡಿ, ಹೂವಿನ ಕಟ್ಟಿ ಮಾರುವ ವ್ಯಾಪಾರ, ಗ್ರಂಥಿಗೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಾರೆ.
ಅಷ್ಟೇ ಅಲ್ಲದೆ ಹೋಲ್ ಸೇಲ್, ರೀಟೇಲ್ ದರದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಾರೆ. ಈ ಕೊರೊನಾ ಸಂಕಷ್ಟದಿಂದಾಗಿ ಕಳೆದ ಮೂರು ತಿಂಗಳಿಂದ ವ್ಯಾಪಾರ ಅಷ್ಟಾಗಿ ನಡೆಯದೆ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಕೊರೊನಾದಿಂದಾಗಿ ಕಳೆದ ಮೂರು ತಿಂಗಳಿಂದ ವ್ಯಾಪಾರ ವಹಿವಾಟು ಮಾಡಲು ಕಷ್ಟವಾಗಿದೆ. ಸರ್ಕಾರದ ನಿಯಮಗಳಿಂದ ಸಾರ್ವಜನಿಕರು ಹೂವಿನ ಅಂಗಡಿ ಹಾಗೂ ಗ್ರಂಧಿಗೆ ಅಂಗಡಿಗಳಿಗೆ ಬರುವುದು ಕಡಿಮೆ ಆಗಿದೆ. ಸರ್ಕಾರ ನಮ್ಮ ಸಮುದಾಯಕ್ಕೂ ಹೆಚ್ಚಿನ ರೀತಿಯಲ್ಲಿ ಪರಿಹಾರ ಘೋಷಿಸಬೇಕು ಎಂದು ಹೂವಿನ ವ್ಯಾಪಾರ ಮಾಡುವ ನಾಗರಾಜ್ ತಿಳಿಸಿದರು.
ರಾಜ್ಯಾದ್ಯಂತ ಸಂಕಷ್ಟಕ್ಕೆ ಸಿಲುಕಿರುವ ಇನ್ನೂ ಹಲವು ಸಾಮುದಾಯಗಳಿವೆ. ಅದರಲ್ಲಿ ಬಲಿಜ ಸಾಮುದಾಯವು ಒಂದು. ರಾಜ್ಯದಲ್ಲಿ ಸಾವಿರಾರು ಬಲಿಜರು ತಮ್ಮ ಕುಲ ವೃತ್ತಿ ಬಳೆ ವ್ಯಾಪಾರ, ಹೂವಿನ ವ್ಯಾಪಾರ, ದಾಸ ವೃತ್ತಿಯನ್ನು ನಿರ್ವಹಿಸಿಕೊಂಡು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಾರೆ. ನಮ್ಮ ಸಾಮುದಾಯದ ಜೀವನ ನಿರ್ವಹಣೆಗೆ ಸಹಾಯಧನ ನೀಡದಿದ್ದರೂ ಪರವಾಗಿಲ್ಲ, ಬದುಕು ಕಟ್ಟಿಕೊಳ್ಳಲು ಬಲಿಜ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಯಾಗಿ ಶಾಶ್ವತ ಪರಿಹಾರ ಸಿಕ್ಕುವ ಮೂಲಕ ಬೇಡಿಕೆ ಇಡೇರಬೇಕು ಎಂದು ಕೆ.ಆರ್.ಪುರದ ಶ್ರೀಮಾರುತಿ ಬಲಿಜ ಸಂಘದ ಕಾರ್ಯದರ್ಶಿ ವೇಣುಗೋಪಾಲ ತಿಳಿಸಿದರು.
ಬಲಿಜ ಸಾಮುದಾಯದ ಮುಖಂಡರಾದ ನಾಗರಾಜ್, ಗಣೇಶ್, ಗೋವಿಂದರಾಜ (ರಾಜಿ) ತಮ್ಮ ಸಾಮುದಾಯದ ಸಮಸ್ಯೆಗಳ ಬಗ್ಗೆ ಧ್ವನಿಗೂಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ