
ಪ್ರಗತಿವಾಹಿನಿ ಸುದ್ದಿ: ಬಳ್ಳಾರಿಯಲ್ಲಿ ನಡೆಸ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಆಪ್ತ ಎನ್ನಲಾದ ಸತೀಶ್ ರೆಡ್ಡಿಯ ಇಬ್ಬರು ಖಾಸಗಿ ಗನ್ ಮ್ಯಾನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬ್ಯಾನರ್ ವಿಚಾರಕ್ಕೆ ಜನಾರ್ದನ ರೆಡ್ಡಿ ಮತ್ತು ನಾರಾ ಭರತ್ ರೆಡ್ಡಿ ಬೆಂಬಲಿಗರ ನಡುವೆ ನಡೆದ ಘರ್ಷಣೆ ವೇಳೆ ಕಲ್ಲು ತೂರಾಟ, ಹೊಡಿಬಡಿ ಸಂದರ್ಭದಲ್ಲಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಇದೇ ವೇಳೆ ಸತೀಶ್ ರೆಡ್ಡಿಯ ಗನ್ ಮ್ಯಾನ್‌ಗಳು ಫೈರಿಂಗ್ ಮಾಡಿದ್ದಾರೆ ಎನ್ನಲಾದ ದೃಶ್ಯಗಳು ಸೆರೆಯಾಗಿತ್ತು. ಸತೀಶ್ ರೆಡ್ಡಿಯ ಗನ್ ಮ್ಯಾನ್ ಗಳು ಹಾರಿಸಿದ ಗುಂಡಿನಿಂದಲೇ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಬಲಿಯಾಗಿದ್ದನು ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ.
ಘಟನೆ ಬಳಿಕ ನಾಪತ್ತೆಯಾಗಿರುವ ಸತೀಶ್ ರೆಡ್ಡಿಯ ಇಬ್ಬರು ಖಾಸಗಿ ಗನ್ ಮ್ಯಾನ್‌ಗಳನ್ನು ಬಳ್ಳಾರಿಯ ಬ್ರೂಸ್ ಪೇಟೆ ಠಾಣೆಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಸತೀಶ್ ರೆಡ್ಡಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.



