Kannada NewsKarnataka NewsLatest

*ನಾಳೆ ಬೆಂಗಳೂರು ಬಂದ್: ಏನಿರುತ್ತೆ? ಏನಿರಲ್ಲ?*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿರುವ ಬೆನ್ನಲ್ಲೇ ರಾಜ್ಯದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ನಾಳೆ ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ.

ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ಖಂಡಿಸಿ ನಾಳೆ ಸೆ.26ರಂದು ಕರ್ನಾಟಕ ಜಲಸಂರಕ್ಷಣಾ ಸಮಿತಿ ಬೆಂಗಳೂರು ಬಂದ್ ಗೆ ಕರೆ ನೀಡಿದ್ದು, ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ಘೋಷಿಸಿವೆ. ಈ ಹಿನ್ನೆಲೆಯಲ್ಲಿ ನಾಳೆ ರಾಜಧಾನಿ ಬೆಂಗಳೂರು ಸಂಪೂರ್ಣ ಸ್ಥಬ್ಧಗೊಳ್ಳಲಿದೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ರೈತ ಮುಖಂಡ ಕುರಬೂರು ಶಾಂತಕುಮಾರ್, ನಾಳೆ ಬೆಂಗಳೂರು ಸಂಪೂರ್ಣ ಬಂದ್ ಆಗಲಿದೆ. ನಾಳೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್ ಇರಲಿದೆ. ಬಹುತೇಕ ಎಲ್ಲಾ ಸಂಘಟನೆಗಳು ಬಂದ್ ಗೆ ಬೆಂಬಲ ಘೋಷಿಸಿವೆ. ಟೌನ್ ಹಾಲ್ ನಿಂದ ಬೃಹತ್ ರ್ಯಾಲಿ ನಡೆಯಲಿದೆ. ಕಾವೇರಿ ನೀರಿಗಾಗಿ ಒಗ್ಗಟ್ಟಿನ ಹೋರಾಟ ಇದಾಗಿದ್ದು, ಸ್ವಯಂಪ್ರೇರಿತವಾಗಿ ಬಂದ್ ನಲ್ಲಿ ಭಾಗವಹಿಸಬೇಕು ಎಂದು ತಿಳಿದ್ದಾರೆ.

ಬೆಂಗಳೂರು ಬಂದ್ ಗೆ ಕೆ.ಎಸ್.ಆರ್.ಟಿ.ಸಿ, ಬಿಎಂಟಿಸಿ, ಖಾಸಗಿ ಬಸ್, ವಾಹನಗಳು, ಓಲಾ, ಊಬರ್, ಆಟೋ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಘೋಷಿಸಿವೆ. ಈ ಹಿನ್ನೆಲೆಯಲ್ಲಿ ನಾಳೆ ಬೆಂಗಳೂರಿನಲ್ಲಿ ಸರ್ಕಾರಿ ಹಾಗೂ ಖಾಸಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿವೆ.

ಹೋಟೆಲ್ ಮಾಲೀಕರು, ಶಾಲೆ-ಕಾಲೇಜುಗಳು, ಶಾಪಿಂಗ್ ಮಾಲ್ ಗಳು, ಜ್ಯುವೆಲರಿ ಶಾಪ್ ಮಾಲೀಕರು, ಪಬ್, ಬಾರ್ ಅಸೋಸಿಯೇಷನ್ ಗಳು ಕೂಡ ಬಂದ್ ಗೆ ಬೆಂಬಲ ನೀಡಿದ್ದು, ನಾಳೆ ಬೆಂಗಳೂರಿನಲ್ಲಿ ಹೋಟೆಲ್, ರೆಸ್ಟೋರೆಂಟ್, ಬೀದಿಬದಿ ವ್ಯಾಪಾರ, ಶಾಪಿಂಗ್ ಮಾಲ್ ಗಳು ಬಂದ್ ಆಗಲಿವೆ.

ದಿನಸಿ, ತರಕಾರಿ, ಅಂಚೆ ಕಚೇರಿ ತೆರೆದಿರಲಿದೆ. ಅಗತ್ಯ ಹಾಗೂ ತುರ್ತು ಸೇವೆ, ಆಸ್ಪತ್ರೆಗಳು ಹೊರತುಪಡಿಸಿ ಬಹುತೇಕ ಎಲ್ಲವೂ ಬಂದ್ ಆಗಲಿವೆ.


Related Articles

Back to top button