ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರು ಗಲಭೆ ಪ್ರಕರಣಕ್ಕೆ ಕಾರಣವಾಗಿದ್ದ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ನವೀನ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದು, ಪೋಸ್ಟ್ ಹಾಕಿದ್ದು ನಾನೇ ಎಂದು ಹೇಳಿದ್ದಾನೆ.
ಪುಲಿಕೇಶಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕನ ಮಗ ನವೀನ್ ಎಂಬುವರ ಫೇಸ್ಬುಕ್ ಖಾತೆಯಲ್ಲಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಲಾಗಿತ್ತು. ಇದರಿಂದ ಒಂದು ಕೋಮಿನ ಜನರು ಕೋಪಗೊಂಡು ಡಿಜೆ ಹಳ್ಳಿ, ಕೆಜಿ ಹಳ್ಳಿ ಹಾಗೂ ಕಾವಲ್ ಬೈರಸಂದ್ರ ಪ್ರದೇಶಗಳಲ್ಲಿ ಗಲಭೆ ನಡೆಸಿ ಶಾಸಕರ ಮನೆ ಎರಡು ಪೊಲಿಸ್ ಠಾಣೆ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು.
ಗಲಭೆಗೆ ಕಾರಣವಾದ ಆರೋಪಿ ನವೀನ್ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ನವೀನ್ ತನ್ನ ತಪ್ಪೊಪ್ಪಿಕೊಂಡಿದ್ದು, ವಿವಾದಾತ್ಮಕ ಫೋಸ್ಟ್ ಹಾಕಿದ್ದು ನಾನೇ. ಈ ಪೋಸ್ಟ್ನಿಂದ ಹೀಗೆ ಗಲಭೆ ಆಗುತ್ತೇ ಎಂದು ಗೊತ್ತಿರಲಿಲ್ಲ ಎಂದು ನವೀನ್ ಪೊಲೀಸರ ಮುಂದೆ ಹೇಳಿದ್ದಾನೆ. ರಾತ್ರಿ 8 ಗಂಟೆ ವೇಳೆಗೆ ತಾನೇ ಖುದ್ದು ಈ ಪೋಸ್ಟ್ ಡಿಲೀಟ್ ಮಾಡಿರುವುದಾಗಿಯೂ ಬಾಯ್ಬಿಟ್ಟಿದ್ದಾನೆ.
ನವೀನ್ ಮೊಬೈಲ್ ಪತ್ತೆಗಾಗಿ ಶೋಧ ನಡೆದಿದ್ದು, ಲ್ಯಾಪ್ಟ್ಯಾಪ್ನಲ್ಲಿ ನವೀನ್ ಪಾಸ್ವಾರ್ಡ್ ಮೂಲಕ ಫೇಸ್ಬುಕ್ ಆಕ್ಸಿಸ್ ಮಾಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ