
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇದೀಗ ಬಿಎಂಟಿಸಿ ಬಸ್ ಚಾಲಕನಿಗೆ ಕೊರೊನಾ ಪಾಸಿಟೀವ್ ಬಂದಿದ್ದು ಆತಂಕವನ್ನೇ ಹೆಚ್ಚಿಸಿದೆ. ಅಲ್ಲದೇ ಬಸ್ ಚಾಲಕನ ಟ್ರಾವೆಲ್ ಹಿಸ್ಟ್ರಿ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.
ಹೌದು. ಬಿಎಂಟಿಸಿ ಬಸ್ ಚಾಲಕರೊಬ್ಬರಿಗೆ ಕೊವಿಡ್ ಪಾಸಿಟೀವ್ ಬಂದಿದ್ದು, ಚಾಲಕ ಮೂರು ದಿನಗಳ ರಜೆಯಲ್ಲಿದ್ದು, ಸ್ವಯಂ ಪ್ರೇರಿತವಾಗಿ ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡಿದ್ದರು. ಜೂನ್ 10ರಂದು ಬಂದ ವರದಿಯಲ್ಲಿ ಸೋಂಕು ತಗುಲಿರುವುದು ಖಚಿತವಾಗಿದೆ.
ಬಸ್ ಚಾಲಕ ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳ ಪ್ರಯಾಣದ ಹಿನ್ನೆಲೆಯನ್ನು ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಇವರ ಜತೆ ಪ್ರಯಾಣದ ಸಂಪರ್ಕ ಹೊಂದಿದ್ದ ಎಲ್ಲರಲ್ಲೂ ಇದೀಗ ಕೊರೊನಾ ಭೀತಿ ಆರಂಭವಾಗಿದೆ.
ದೈನಂದಿನ ಕರ್ತವ್ಯಕ್ಕೆ ವರದಿ ಮಾಡುವಾಗ ಅವರಿಗೆ ಜ್ವರ ಅಥವಾ ಆರೋಗ್ಯ ಸಮಸ್ಯೆಯ ಯಾವುದೇ ಲಕ್ಷಣಗಳು ಇರಲಿಲ್ಲ ಎನ್ನಲಾಗಿದೆ.
ಬಿಎಂಟಿಸಿ ಬಸ್ ಚಾಲಕನಿಗೆ ಕೋವಿಡ್-19 ಪರೀಕ್ಷೆಯ ವರದಿ ಪಾಸಿಟಿವ್ ಬರುತ್ತಿದ್ದಂತೆ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆಹಚ್ಚುತ್ತಿದ್ದಾರೆ.