ಬೆಂಗಳೂರಿನಲ್ಲಿ ಮತ್ತೋರ್ವನಿಗೆ ಕೊರೊನಾ ಸೋಂಕು ಶಂಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹೈದ್ರಾಬಾದ್ ಮೂಲದ ಬೆಂಗಳೂರಿನ ಟೆಕ್ಕಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವ ಬೆನ್ನಲ್ಲೇ ಇದೀಗ ಮತ್ತೋರ್ವ ವ್ಯಕ್ತಿಯಲ್ಲಿ ಸೋಂಕು ಪತ್ತೆ ಶಂಕೆ ವ್ಯಕ್ತವಾಗಿದ್ದು, ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೌದಿ ಅರೇಬಿಯಾದಿಂದ ಈ ವ್ಯಕ್ತಿ ಬೆಂಗಳೂರಿಗೆ ಆಗಮಿಸಿದ್ದಾರೆ. ಆದರೆ, ಏರ್​ಪೋರ್ಟ್​ನಲ್ಲಿ ಪರೀಕ್ಷೆ ವೇಳೆ ಇವರಿಗೆ ಕೆಮ್ಮು ಹಾಗೂ ಜ್ವರ ಇರುವುದು ಕಂಡು ಬಂದಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ವ್ಯಕ್ತಿಯನ್ನು ಏರ್​ಪೋರ್ಟ್​ನಿಂದ ನೇರವಾಗಿ ರಾಜೀವ್ ಗಾಂಧಿ ಆಸ್ಪತ್ರೆಗೆ ರವಾನಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

ಆಸ್ಪತ್ರೆಗೆ ದಾಖಲಾದ ನಂತರ ಆತನಿಗೆ ಜ್ವರ ಕಡಿಮೆಯಾಗಿದೆ, ಹಾಗಾಗಿ ಸೋಂಕು ಇರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಆದರೂ, ಮುಂಜಾಗ್ರತಾ ಕ್ರಮವಾಗಿ ಆತನನ್ನು ಆಸ್ಪತ್ರೆಯಲ್ಲಿ ದಾಖಲಿಸಿ ರಕ್ತಪರೀಕ್ಷೆ ಮಾಡಲಾಗಿದೆ. ರಕ್ತ ಪರೀಕ್ಷೆಯ ವರದಿ ಮಧ್ಯಾಹ್ನದ ವೇಳೆ ಬರಲಿದ್ದು, ನಂತರವಷ್ಟೇ ಕೊರೋನಾ ವೈರಸ್​ ತಗುಲಿರುವ ಮಾಹಿತಿ ಖಚಿತವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಈವರೆಗೆ 4 ಜನ ರೋಗಿಗಳು ಕೊರೋನಾ ಶಂಕೆಯ ಆಧಾರದ ಮೇಲೆ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button