ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡಿದೆ. ಡೆಡ್ಲಿ ವೈರಸ್ ದಿನೇ ದಿನೇ ಹಲವಾರು ಜನರನ್ನು ಬಲಿಪಡೆದುಕೊಳ್ಳುತ್ತಿದೆ. ಈ ನಡುವೆ ತಜ್ಞರು ಕೊರೊನಾ ಸೋಂಕಿನ ಬಗ್ಗೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ.
ಬೆಂಗಳೂರಿನಲ್ಲಿ ಪ್ರತಿ ದಿನ 500ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದರೆ 6-7 ಜನರು ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಇದರ ನಡುವೆ ಮತ್ತೊಂದು ಆತಂಕಕಾರಿ ವಿಚಾರ ಹೊರಬಿದ್ದಿದೆ. ಜುಲೈ ಅಂತ್ಯದ ವೇಳೆಗೆ ಬೆಂಗಳೂರಿನಲ್ಲಿ ಬರೋಬ್ಬರಿ 30 ಸಾವಿರದಿಂದ 40 ಸಾವಿರ ಸೋಂಕಿತರು ಪತ್ತೆಯಾಗಲಿದ್ದಾರೆ ಎಂದು ತಜ್ಞ ವೈದ್ಯರಾದ ಸುದರ್ಶನ್ ಬಲ್ಲಾಳ್ ಎಚ್ಚರಿಕೆ ಕೊಟ್ಟಿದ್ದಾರೆ. ಅಲ್ಲದೇ ಮುಂದಿನ 15 ದಿನ ಬೆಂಗಳೂರಿನಲ್ಲಿ ಕೊರೊನಾ ರಣಕೇಕೆ ಹೆಚ್ಚಾಗುತ್ತೆ ಎಂದೂ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಸೋಂಕು ಹೆಚ್ಚಿತ್ತಿದ್ದು, ಸೋಂಕಿತರ ಸಂಖ್ಯೆ 5 ಸಾವಿರ ದಾಟಿದೆ. ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 735 ಕೇಸ್ ದಾಖಲಾಗಿದೆ. ಈ ಮೂಲಕ ನಗರದಲ್ಲಿ ಕೇಸ್‍ಗಳ ಸಂಖ್ಯೆ 5290ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳೇ ಬರೋಬ್ಬರಿ 4,649 ಇದ್ದು, ನೆನ್ನೆ ಒಂದೇ ಒಂದು ಕೇಸ್ ಕೂಡ ಡಿಸ್ಚಾರ್ಜ್ ಆಗಿಲ್ಲ ಎಂಬುದು ಆತಂಕಕಾರಿಯಾಗಿದೆ.
ಈಗಾಗಲೇ ಬೆಂಗಳೂರಿನಲ್ಲಿ ಸೋಂಕಿತ ರೋಗಿಗಳಿಗೆ ಆಂಬುಲೆನ್ಸ್, ಬೆಡ್, ಆಸ್ಪತ್ರೆಗಳ ಕೊರತೆ ಎದುರಾಗಿದ್ದು, ರೋಗಿಗಳು ಮನೆಯಲ್ಲಿ, ಮಾರ್ಗಮಧ್ಯೆ, ಆಸ್ಪತ್ರೆ ಆವರಣಗಳಲ್ಲೇ ಪರದಾಡಿ ಸಾವನ್ನಪ್ಪುತ್ತಿದ್ದಾರೆ. ಇದೀಗ ಜುಲೈ ಅಂತ್ಯದ ವೇಳೆಗೆ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 40 ಸಾವಿರಕ್ಕೆ ಏರಿಕೆಯಾಗಲಿದೆ ಎಂಬುದು ಬೆಂಗಳೂರಿಗರನ್ನೇ ಬೆಚ್ಚಿ ಬೀಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ