ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ ಒಂದೇ ಕುಟುಂಬದ ಐವರು ಸದಸ್ಯರ ಆತ್ಮಹತ್ಯೆ ಪ್ರಕರಣ ಕ್ಷಣಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.
ಕಳೆದ 4-5 ದಿನಗಳ ಹಿಂದೆಯೇ ಕುಟುಂಬ ಸದಸ್ಯರು ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಆದರೆ ಹೆಣಗಳ ಮಧ್ಯೆ 2 ವರ್ಷದ ಪುಟ್ಟ ಮಗುವೊಂದು ಬದುಕುಳಿದಿರುವುದು ಅಚ್ಚರಿಯಾಗಿದೆ.
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಸ್ಥಳೀಯ ಪತ್ರಿಕೆ ಸಂಪಾದಕ ಶಂಕರ್ ಎಂಬುವವರ ಕುಟುಂಬ ಸದಸ್ಯರು ತಮ್ಮದೇ ಐಷಾರಾಮಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಶಂಕರ್ ಅವರ ಪತ್ನಿ ಭಾರತಿ, ಮಗ ಮಧುಸಾಗರ್, ಶಂಕರ್ ಅವರ ಇಬ್ಬರು ಹೆಣ್ಣುಮಕ್ಕಳಾದ ಸಿಂಧೂರಾಣಿ, ಸಿಂಚನಾ ನೇಣಿಗೆ ಕೊರಳೊಡ್ಡಿದ್ದಾರೆ. 9 ತಿಂಗಳ ಮಗು ಹಸಿವಿನಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಮನೆಯಲ್ಲಿ ಐವರು ಸಾವನ್ನಪ್ಪಿದ್ದರೂ ಎರಡುವರೆ ವರ್ಷದ ಮಗು ಪವಾಡ ರೀತಿಯಲ್ಲಿ ಬುದುಕುಳಿದಿದೆ. ಮಗುವಿಗೆ ನಿದ್ದೆ ಮಾತ್ರೆ ತಿನ್ನಿಸಿರುವ ಅನುಮಾನವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಷಾರಾಮಿ ಮನೆ ಹೊಂದಿರುವ ಶಂಕರ್ ಕೆಳಮಹಡಿಯನ್ನು ಬಾಡಿಗೆಗೆ ನೀಡಿದ್ದರು. ಮೊದಲ ಮಹಡಿಯಲ್ಲಿ ಒಂದು ಕೊಠಡಿಯಲ್ಲಿ ಶಂಕರ್ ಪತ್ನಿ ಭಾರತಿ ಹಾಗೂ ಕಿರಿಯ ಪುತ್ರಿ ಸಿಂಧೂರಾಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದೇ ಕೊಠಡಿ ಬೆಡ್ ಮೇಲೆ ಆಕೆಯ 9 ತಿಂಗಳ ಮಗುವಿನ ಮೃತದೇಹ ಪತ್ತೆಯಾಗಿದೆ.
ಇನ್ನು ಎರಡು ಪ್ರತ್ಯೇಕ ಕೊಠಡಿಯಲ್ಲಿ ಹಿರಿಯ ಪುತ್ರಿ ಸಿಂಚನಾ ಹಾಗೂ ಪುತ್ರ ಮಧು ಸಾಗರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧುಸಾಗರ್ ಕೊಠಡಿಯಲ್ಲಿಯೇ 2 ವರ್ಷದ ಮಗು ಪ್ರೇಕ್ಷಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಬದುಕುಳಿದಿದ್ದಾಳೆ.
ಒಟ್ಟಾರೆ ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ ಸಿಲಿಕಾನ್ ಸಿಟಿಯನ್ನು ಬೆಚ್ಚಿ ಬೀಳಿಸಿದ್ದು, ತನಿಖೆ ಚುರುಕುಗೊಂಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ