
ಪ್ರಗತಿವಾಹಿನಿ ಸುದ್ದಿ: ಸ್ನೇಹಿತರೊಂದಿಗೆ ಬೆಂಗಳೂರಿನ ಬನ್ನೇರುಘಟ್ಟ ಬಳಿಯ ಸುವರ್ಣಮುಖಿ ಕಲ್ಯಾಣಿಗೆ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಕಲ್ಯಾಣಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ದೀಪು (20) ಹಾಗೂ ಯೋಗೀಶ್ವರ್ (20) ಮೃತರು. ಬೊಮ್ಮಸಂದ್ರದ ಎಸ್ ಎಫ್ ಎಸ್ ಕಾಲೇಜಿನ ಐವರು ವಿದ್ಯಾರ್ಥಿಗಳು ಬನ್ನೇರುಘಟ್ಟ ಬಳಿಯ ಸುವರ್ಣಮುಖಿ ಕಲ್ಯಾಣಿಗೆ ಹೋಗಿದ್ದರು. ಈ ವೇಳೆ ಈಜಲು ಬಾರದಿದ್ದರೂ ಇಬ್ಬರು ಸ್ನೇಹಿತರೊಂದಿಗೆ ದೀಪು ಹಾಗೂ ಯೋಗೀಶ್ವರ್ ಕಲ್ಯಾಣಿಗೆ ಇಳಿದಿದ್ದಾರೆ. ಇನ್ನೋರ್ವ ದಡದಲ್ಲಿ ನಿಂತು ವಿಡಿಯೋ ಮಾಡುತ್ತಿದ್ದ.
ಇಬ್ಬರು ಸ್ನೇಹಿತರು ನೀರಿನಲ್ಲಿ ಈಜಲಾಗದೇ ಮುಳುಗುತ್ತಿರುವುದೂ ಇಬ್ಬರಿಗೆ ಅರಿವಾಗಿಲ್ಲ. ದಡದಲ್ಲಿ ನಿಂತಿದ್ದ ವಿದ್ಯಾರ್ಥಿ ಅವರು ನೀರಿನಲ್ಲಿ ಮುಳುಗುತ್ತಿದ್ದಾರೆ ಕಾಪಾಡುವಂತೆ ಕೂಗಿ ಹೇಳಿದ್ದಾನೆ. ಆಗ ರಕ್ಷಿಸಲು ಮುಂದಾದರೂ ಇಬ್ಬರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಸ್ನೇಹಿತರ ಕಣ್ಣಮುಂದೆಯೇ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ವಿದ್ಯಾರ್ಥಿಗಳ ಮೃತದೇಹವನ್ನು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ನೀರಿನಿಂದ ಹೊರತೆಗೆದಿದ್ದಾರೆ.