Latest

ಯಡಿಯೂರಪ್ಪ ನಮ್ಮ ನಾಯಕರಲ್ಲ; ಸಿಎಂ ಅಷ್ಟೇ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಎಂ ಬಿ ಎಸ್ ಯಡಿಯೂರಪ್ಪ ನಮ್ಮ ನಾಯಕರಲ್ಲ ಸಿಎಂ ಅಷ್ಟೇ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯಡಿಯೂರಪ್ಪ ನಾಯಕತ್ವದ ಬಗ್ಗೆಯೇ ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಮ್ಮ ನಾಯಕ ಯಡಿಯೂರಪ್ಪ ಅಲ್ಲ, ನಮ್ಮ ನಾಯಕರು ಅಮಿತ್ ಶಾ, ಪ್ರಧಾನಿ ಮೋದಿ. ನಮಗೆ ಯಡಿಯೂರಪ್ಪನವರ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಸರ್ಕಾರವನ್ನು ಬೀಳಿಸುವ ಉದ್ದೇಶವೂ ನಮಗೆ ಇಲ್ಲ. ಇನ್ನು ಯಡಿಯೂರಪ್ಪ ನಾಯಕತ್ವ ಬದಲಾವಣೆ ಬಗ್ಗೆ ನಾನು ಯಾವುದೇ ಮಾತನಾಡುವುದಿಲ್ಲ. ಈ ಬಗ್ಗೆ ನಾನು ನಮ್ಮ ಹೈಕಮಾಂಡ್ ಜತೆ ಚರ್ಚೆ ನಡೆಸುತ್ತೇನೆ ಎಂದು ಯತ್ನಾಳ್ ಹೇಳಿದ್ದಾರೆ.

ನಮ್ಮ ಹೈಕಮಾಂಡ್ 3 ವರ್ಷ ಬಿಜೆಪಿ ಸರ್ಕಾರ ಇರಬೇಕು ಎಂದರು ಅದಕ್ಕೆ ನಾವು ಒಪ್ಪಿದ್ದೇವೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧ ಎಂದರು.

ಇನ್ನು ನಾನಾಗಿಯೇ ಸಚಿವ ಸ್ಥಾನ ಬೇಕು ಎಂದು ಸಿಎಂ ಯಡಿಯೂರಪ್ಪ ಬಳಿ ಬೇಡಿಕೆ ಇಡುವುದಿಲ್ಲ. ಯಡಿಯೂರಪ್ಪ ಸರ್ಕಾರದಲ್ಲಿ ಸಚಿವನಾಗುವುದೂ ಇಲ್ಲ. ನಾನು ಹೈಕಮಾಂಡ್ ಹೇಳಿದರಷ್ಟೇ ಸಚಿವನಾಗುತ್ತೇನೆ ಎಂದು ತಿಳಿಸಿದರು.

Home add -Advt

ಶನಿವಾರ ಸಿಎಂ ಬಿಎಸ್ ವೈ ಸಭೆ ಕರೆದಿದ್ದರು. ಸಭೆಯಲ್ಲಿ ನಾನು ಭಾಗಿಯಾಗಿಲ್ಲ. ನಾನು ಶಾಸಕನಾಗಿ ಹಲವು ದಿನಗಳಿಂದ ಕ್ಷೇತ್ರದ ಕೆಲಸದ ಬಗ್ಗೆ ಕೇಳಿದ್ದೆ. ವಿಜಯಪುರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಣ ಬಿಡುಗಡೆ ಮಾಡಿಲ್ಲ ಮಾಡುವಂತೆ ಹಲವು ಸಲ ಬೇಡಿಕೆ ಇಟ್ಟಿದ್ದೆ. ಆದರೆ ಆ ಬಗ್ಗೆ ಸಿಎಂ ಗಮನ ಹರಿಸಿಲ್ಲ. ಇದರಿಂದ ನನಗೆ ಬೇಸರವಾಗಿದೆ. ಓರ್ವ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಬೇಡಿಕೆ ಇಟ್ಟರೂ ಮಾಡಿಕೊಡಲಿಲ್ಲ. ಈಗ ರಾಜ್ಯದಲ್ಲಿ ಕೊರೊನಾ ಸೋಂಕು ಹರಡಿರುವುದರಿಂದ ಸಿಎಂ ಆ ಕೆಲಸದಲ್ಲಿ ಬ್ಯುಸಿಯಿದ್ದಾರೆ. ಹೀಗಿರುವಾಗ ಮತ್ತೆ ಮತ್ತೆ ಅವರ ಬಳಿ ಹೋಗಿ ಕೇಳುವುದರಲ್ಲಿ ಅರ್ಥವಿಲ್ಲ ಎಂದು ಸಭೆಗೆ ಗೈರಾಗಿದ್ದಾಗಿ ತಿಳಿಸಿದರು.

ಶಾಸಕ ಉಮೇಶ್ ಕತ್ತಿ ಮನೆಯಲ್ಲಿ ರೆಬಲ್ ಶಾಸಕರ ಸಭೆ ವಿಚಾರವಾಗಿ ಮಾತನಾಡಿದ ಯತ್ನಾಳ್, ಎಲ್ಲಾ ಶಾಸಕರು ಲೋಕಾಬಿರಾಮವಾಗಿ ಚರ್ಚಿಸಲು ಒಂದೆಡೆ ಸೇರಿ ಊಟ ಮಾಡಿದೆವು. ಈ ವೇಳೆ ಕಷ್ಟ ಸುಖ ಹಂಚಿಕೊಂಡಿದ್ದೇವೆ. ಹಲವು ದಿನಗಳಿಂದ ಶಾಸಕರು ಒಟ್ಟಾಗಿ ಸೇರಿರಲಿಲ್ಲ. ಹಾಗಾಗಿ ಉಮೇಶ್ ಕತ್ತಿ ಮನೆಯಲ್ಲಿ ಊಟಕ್ಕಾಗಿ ಎಲ್ಲರೂ ಒಂದೆಡೆ ಸೇರಿದ್ದಾಗಿ ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button