ಪ್ರಗತಿವಾಹಿನಿ ಸುದ್ದಿ; ವಿಜಯಪುರ: ರಾಜ್ಯ ಸಚಿವ ಸಂಪುಟದಲ್ಲಿ ಕಳಪೆ ಸಾಧನೆ ಮಾಡಿರುವ ಸಚಿವರನ್ನು ಕೈಬಿಟ್ಟು, ಹೊಸಬರಿಗೆ ಅವಕಾಶ ನೀಡಬೇಕು. ಸರ್ಕಾರ ಉಳಿಯಲು ಕೆಲ ಸಚಿವರು ತ್ಯಾಗ ಮಾಡುವುದು ಒಳಿತು ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯಲ್ಲಿ ಕಳಪೆ ಸಾಧನೆ ಮಾಡಿದ ಸಚಿವರನ್ನು ಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು. ಸಚಿವ ಸ್ಥಾನ ಕಳೆದುಕೊಂಡರೆ ಅವರೇನು ಬಂಡಾಯ ಏಳಲ್ಲ. ಬಂಡಾಯ ಎದ್ದು ಚುನಾವಣೆಗೆ ಹೋದರೂ ಅವರು ಮರು ಆಯ್ಕೆಯಾಗಲ್ಲ ಎಂದು ಹೇಳಿದರು.
ಕೆಲ ಸಚಿವರು ವಿಧಾನಸೌಧ, ವಿಕಾಸಸೌಧದತ್ತ ಸುಳಿಯುವುದೂ ಇಲ್ಲ. ಅವರನ್ನು ಶಾಸಕರಾದ ನಾವೇ ಹುಡುಕಬೇಕಾದ ಸ್ಥಿತಿಯಿದೆ. ಅವರ ಪಿಎಗಳೂ ಸಹ ಸಿಗುತ್ತಿಲ್ಲ ಹೀಗಾಗಿ ಇಂತಹ ಸಚಿವರನ್ನು ಸಂಪುಟದಿಂದ ಕೈಬಿಡುವುದು ಒಳಿತು. ನಾನು ಈಗಾಗಲೇ ಸಿಎಂ ಯಡಿಯೂರಪ್ಪನವರಿಗೆ ಶಾಸಕರ, ಸಚಿವರ ಮೌಲ್ಯಮಾಪನ ಮಾಡುವಂತೆ ಮನವಿ ಮಾಡಿದ್ದೇನೆ. ಉತ್ತಮ ಸಾಧನೆ, ಅಭಿವೃದ್ಧಿ ಕೆಲಸ ಮಾಡಿದವರಿಗೆ ಆದ್ಯತೆ ನೀಡಲಿ ಎಂದು ಹೇಳಿದರು..
ಇನ್ನು ನಾನು ಸಚಿವ ಸ್ಥಾನಕ್ಕಾಗಿ ಯಾವುದೇ ಲಾಬಿ ಮಾಡಿಲ್ಲ. ನಾನೂ ಶಾಸಕನಾಗಿರುವುದರಿಂದ ಪ್ರತಿದಿನ ಸಿಎಂ ಮನೆ ಮುಂದೆ ನಿಂತು ಒತ್ತಡ ಹೇರಬಹುದಿತ್ತು. ಆದರೆ ಒತ್ತಡ ಹೇರುವುದರಿಂದ ಯಾವ ಪ್ರಯೋಜನವಿಲ್ಲ. ಲಾಬಿ ಮಾಡದೇಯೇ ಹೆಂದೆ ಕೇಂದ್ರ ಸಚಿವನಾಗಿದ್ದೆ. ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿಯವರು ಕರೆದು ನನಗೆ ಸಚಿವ ಸ್ಥಾನ ಕೊಟ್ಟಿದ್ದರು. ಸದ್ಯ ಶಾಸಕನಾಗಿ ವಿಜಯಪುರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇನೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ