*ಸರದಾರ ಧಾಮ ಮಾದರಿಯಲ್ಲಿ ಬೆಳಗಾವಿ ಬಳಿ ಬಸವ ಧಾಮ : ಕನ್ಹೇರಿ ಶ್ರೀ*

ಸರದಾರ ಧಾಮ ಮಾದರಿಯಲ್ಲಿ ಬೆಳಗಾವಿ ಬಳಿ ಬಸವ ಧಾಮ : ಕನ್ಹೇರಿ ಶ್ರೀ
ಪ್ರಗತಿವಾಹಿನಿ ಸುದ್ದಿ/ ಬೆಳಗಾವಿ: ಗುಜರಾತಿನ ಪಟೇಲ್ ಸಮಾಜದ ಮಕ್ಕಳಿಗಾಗಿ ಮಾಡಲಾಗಿರುವ ಸರದಾರ ಧಾಮದ ಮಾದರಿಯಲ್ಲಿ ಬೆಳಗಾವಿ- ಹುಬ್ಬಳ್ಳಿ ಮಧ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ನೀಡಲು ಬಸವಧಾಮ ಆರಂಭಿಸಲಾಗುವುದು ಎಂದು ಕನ್ಹೇರಿ ಮಠದ ಅದೃಷ ಕಾಡಸಿದ್ಧೇಶ್ವರ ಸ್ವಾಮೀಜಿ ತಿಳಿಸಿದರು.
ಬೆಳಗಾವಿಯ ಗಾಂಧಿಭವನದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಗ್ರಾಮೀಣ ಭಾಗದ ಮತ್ತು ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ತರಬೇತಿ ನೀಡುವುದು ಇದರವುದ್ದೇಶ. 140 ರಿಂದ 150 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾರ್ಯ ಆರಂಭವಾಗಲಿದೆ ಎಂದರು.
ಬಡ ಮಕ್ಕಳಿಂದ 1 ರೂಪಾಯಿ ಶುಲ್ಕ ಪಡೆದು ತರಬೇತಿ ನೀಡಲಾಗುವುದು.
ಧಾರವಾಡ – ಬೆಳಗಾವಿ ಮಧ್ಯೆ ಮತ್ತು ಕಲಬುರಗಿಯಲ್ಲಿ ತರಬೇತಿ ಕೇಂದ್ರ ಆರಂಭಿಸಲು ಯೋಜನೆ ರೂಪಿಸಲಾಗಿದೆ. ನಂತರದಲ್ಲಿ ವಿಭಾಗವಾರು ಕೇಂದ್ರ ಮಾಡುವ ಯೋಚನೆ ಇದೆ. ಬೆಳಗಾವಿ- ಹುಬ್ಬಳ್ಳಿ ಮಧ್ಯದಲ್ಲಿ ಆರಂಭಿಸಲು ಜಾಗವನ್ನೂ ನೋಡಲಾಗಿದೆ ಎಂದು ಸ್ವಾಮೀಜಿ ಹೇಳಿದರು.
10ರಿಂದ 20 ಎಕರೆ ಜಾಗ ಬೇಕಾಗುತ್ತದೆ. ಯಾರಾದರೂ ದೇಣಿಗೆ ನೀಡಿದರೆ ಅಥವಾ ಖರೀದಿ ಮೂಲಕ ಜಾಗ ಪಡೆಯಲಾಗುವುದು. 2 ಲಕ್ಷ ಚದರ ಅಡಿ ಕಟ್ಟಡ ನಿರ್ಮಾಣ ಮಾಡಲಾಗುವುದು. ಯುವಕರನ್ನು ಬಳಸಿಕೊಂಡು ಧನ ಸಂಗ್ರಹ ಕಾರ್ಯ ಆರಂಭಿಸಲಾಗುವುದು. ಎಲ್ಲರೂ ಸೇರಿ ಮಾಡಬೇಕಾದ ಕೆಲಸ ಇದು. ಪ್ರತಿ ಹಳ್ಳಿ, ಪ್ರತಿ ಮನೆಯಿಂದ ಹಣ ಸಂಗ್ರಹಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಈಗಾಗಲೆ ಕಂಪನಿ ನೊಂದಣಿಯಾಗಿದೆ. 80 ಜಿ, 12 ಎ ವಿನಾಯಿತಿ ಸಿಕ್ಕಿದೆ. ಹಣ ಅಥವಾ ವಸ್ತುಗಳ ಮೂಲಕ ದೇಣಿಗೆ ನೀಡಬಹುದು. ಇನ್ನು 8- 10 ದಿನದಲ್ಲಿ ಕಾರ್ಯ ಆರಂಭವಾಗಲಿದೆ ಎಂದು ಅವರು ಹೇಳಿದರು.




