*ವಾಹನ ಸವಾರರಿಗೆ ಬಿಗ್ ಶಾಕ್*: *ಸಿಎನ್‌ಜಿ ಬೆಲೆ ಮತ್ತೆ ಏರಿಕೆ, ಒಂದೇ ವರ್ಷದಲ್ಲಿ 11 ರೂ. ಹೆಚ್ಚಳ*

ಪ್ರಗತಿವಾಹಿನಿ ಸುದ್ದಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಈಗ ಮತ್ತೊಂದು ಹೊರೆ ಎದುರಾಗಿದೆ. ವಾಹನ ಸವಾರರ ದೈನಂದಿನ ಖರ್ಚು ಹೆಚ್ಚಿಸುವಂತೆ ಸಿಎನ್‌ಜಿ ಬೆಲೆಯೂ ಏರಿಕೆಯಾಗಿದೆ. ಅದರಲ್ಲೂ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಈ ದರ ಏರಿಕೆ ನೇರ ಹೊಡೆತ ನೀಡಲಿದೆ. ಕಳೆದ ಎರಡೂವರೆ ತಿಂಗಳಲ್ಲೇ ಹಲವು ಬಾರಿ ಬೆಲೆ ಪರಿಷ್ಕರಣೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಈ ವರ್ಷ ಎಂಟನೇ ಬಾರಿಗೆ ಸಿಎನ್‌ಜಿ ದರ ಹೆಚ್ಚಳವಾಗಿದೆ.
ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಹಾನಗರ ಗ್ಯಾಸ್ ಲಿಮಿಟೆಡ್ (MGL) ನವೆಂಬರ್ 14ರಿಂದ ಜಾರಿಗೆ ಬರುವಂತೆ ಸಿಎನ್‌ಜಿ ಬೆಲೆಯನ್ನು ಪ್ರತಿ ಕೆ.ಜಿಗೆ 1.50 ರೂಪಾಯಿ ಹೆಚ್ಚಿಸಿದೆ. ಇದರಿಂದ ಮುಂಬೈನಲ್ಲಿ ಸಿಎನ್‌ಜಿ ದರ ಪ್ರತಿ ಕೆ.ಜಿಗೆ 91.50 ರೂಪಾಯಿಗೆ ತಲುಪಿದೆ.
ಕಳೆದ ಎರಡೂವರೆ ತಿಂಗಳಲ್ಲಿ ಸಿಎನ್‌ಜಿ ಬೆಲೆ ಪ್ರತಿ ಕೆ.ಜಿಗೆ ಒಟ್ಟು 5.50 ರೂಪಾಯಿ ಏರಿಕೆಯಾಗಿದೆ. 2026ರ ಜನವರಿಯಲ್ಲಿ 80.50 ರೂಪಾಯಿ ಇದ್ದ ದರ ಇದೀಗ 91.50 ರೂಪಾಯಿಗೆ ತಲುಪಿದೆ. ಅಂದರೆ ವರ್ಷದ ಆರಂಭದಿಂದ ಇಲ್ಲಿಯವರೆಗೆ 11 ರೂಪಾಯಿ ಅಥವಾ ಸುಮಾರು ಶೇ.14ರಷ್ಟು ಹೆಚ್ಚಳವಾಗಿದೆ. ಈ ವರ್ಷ ಮುಂಬೈನಲ್ಲಿ ಸಿಎನ್‌ಜಿ ದರ ಏರಿಕೆಯಾಗುತ್ತಿರುವುದು ಇದು ಎಂಟನೇ ಬಾರಿ.
ದರ ಏರಿಕೆಗೆ ಕಾರಣವೇನು?
ದೇಶೀಯ ನೈಸರ್ಗಿಕ ಅನಿಲ ಪೂರೈಕೆಯಲ್ಲಿನ ಕೊರತೆ ಮತ್ತು ಅನಿಲ ಖರೀದಿಯ ವೆಚ್ಚ ಹೆಚ್ಚಳವೇ ದರ ಏರಿಕೆಗೆ ಪ್ರಮುಖ ಕಾರಣ ಎಂದು ಮಹಾನಗರ ಗ್ಯಾಸ್ ಲಿಮಿಟೆಡ್ ತಿಳಿಸಿದೆ. ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಲದ ಬೆಲೆ ಹೆಚ್ಚಾಗಿರುವುದೂ ದರ ಪರಿಷ್ಕರಣೆಗೆ ಕಾರಣವಾಗಿದೆ.
ಮುಂಬೈ ಮಹಾನಗರ ಪ್ರದೇಶದಲ್ಲಿ ಸಂಚರಿಸುವ ಸುಮಾರು 12.93 ಲಕ್ಷ ಸಿಎನ್‌ಜಿ ವಾಹನಗಳ ಮೇಲೆ ಈ ದರ ಏರಿಕೆ ಪರಿಣಾಮ ಬೀರಲಿದೆ. ಆಟೋರಿಕ್ಷಾ, ಟ್ಯಾಕ್ಸಿ ಚಾಲಕರು ಹಾಗೂ ಖಾಸಗಿ ವಾಹನ ಮಾಲೀಕರ ಇಂಧನ ವೆಚ್ಚ ಹೆಚ್ಚಾಗಲಿದೆ. ಮುಂದಿನ ದಿನಗಳಲ್ಲಿ ಆಟೋ ಮತ್ತು ಟ್ಯಾಕ್ಸಿ ಪ್ರಯಾಣ ದರಗಳೂ ಏರಿಕೆಯಾಗುವ ಸಾಧ್ಯತೆಯಿದೆ.




