*ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಮಹಿಳಾ ಆಯೋಗಕ್ಕೆ ದೂರು ನೀಡಿದ ಸಂತ್ರಸ್ತೆ*

ಪ್ರಗತಿವಾಹಿನಿ ಸುದ್ದಿ: ಪಂಚಮಸಾಲಿ ಮೀಸಲಾತಿ ಹೋರಾಟದ ನೇತೃತ್ವವಹಿಸಿದ್ದ ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ.
ಬೆಂಗಳೂರು ಮೂಲದ ಮಹಿಳೆಯೊಬ್ಬರು ಜಯಮೃತ್ಯುಂಜಯ ಸ್ವಾಮೀಜಿ ತನ್ನ ವಿಡಿಯೋ ಮಾಡಿಕೊಂಡು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಮಹಿಳೆ ಮೂಲತಃ ಬೆಂಗಳೂರಿನವರಾಗಿದ್ದು, ಸ್ವತಃ ಸ್ವಾಮೀಜಿ ನನ್ನ ಖಾಸಗಿ ವಿಡಿಯೋ ಮಾಡಿ ಲೈಂಗಿಕವಾಗಿ ಸಹಕರಿಸುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನೂ ಸ್ವಾಮೀಜಿಯದ್ದು ಎನ್ನಲಾದ ಖಾಸಗಿ ವಿಡಿಯೋ ಇತ್ತೀಚೆಗೆ ಹರಿದಾಡಿದ್ದು, ಸದ್ಯ ಮಹಿಳೆಯ ದೂರಿನ ಹಿನ್ನೆಲೆ ಪ್ರಕರಣ ಗಂಭೀರ ಸ್ವರೂಪ ಪಡೆದಿದೆ.
ಬೆಂಗಳೂರು ನಿವಾಸಿಯಾಗಿರುವ ನಾನು, ಲಿಂಗಾಯತ ಸಮಾಜಕ್ಕೆ ಸೇರಿದವಳಾಗಿದ್ದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಪೀಠಾಧಿಪತಿಗಳು, ಮಹಾಪೀಠ ಕೂಡಲ ಸಂಗಮ, ಇವರ ಭಕ್ತಳಾಗಿದ್ದು, ಬೆಂಗಳೂರಿಗೆ ಬಂದಾಗ ಹಲವು ಬಾರಿ ಭೇಟಿಯಾಗಿ ಮಾತನಾಡಿ ಅವರ ಹೋರಾಟಗಳ ಬಗ್ಗೆ ಬೆಂಬಲವನ್ನು ಸಹ ನೀಡಿದ್ದೆ. ಹೀಗೆ ಪರಿಚಯವಾಗಿದ್ದ ಸ್ವಾಮೀಜಿಯವರು ನನ್ನನ್ನು ಮಠಕ್ಕೆ ಕರೆಸಿ ‘ಪ್ರಸಾದ ಕೊಡುತ್ತೇನೆ’ ಎಂದು ಹೇಳಿ ನನ್ನ ವಿಶ್ವಾಸವನ್ನು ದುರುಪಯೋಗ ಮಾಡಿಕೊಂಡು ನನ್ನೊಂದಿಗೆ ಮಾತನಾಡುತ್ತಾ ಅಸಭ್ಯವಾದ ಪದಗಳನ್ನು ಬಳಸಿ, ಮೈ ಕೈಯನ್ನು ಮುಟ್ಟುತ್ತ ನನ್ನೊಂದಿಗೆ ದೈಹಿಕವಾಗಿ ತಪ್ಪಾಗಿ ವರ್ತಿಸಿದ್ದು, ಆ ಸಮಯದಲ್ಲಿ ನನ್ನ ತಿಳುವಳಿಕೆಯಿಲ್ಲದೆ ನನ್ನ ಮೇಲೆ ಅವರು ನಡೆಸಿರುವ ಲೈಂಗಿಕ ದೌರ್ಜನ್ಯದ ಖಾಸಗಿ ವಿಡಿಯೋವನ್ನು ಮಾಡಿಕೊಂಡಿದ್ದಾರೆ. ಆ ವಿಡಿಯೋವನ್ನು ಬಳಸಿ ಅವರು ನನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದು, ಪ್ರತಿ ರಾತ್ರಿ ಫೋನ್ ಮಾಡಿ ಬೆತ್ತಲೆ ವಿಡಿಯೋ ಕಾಲ್ ಮಾಡು, ಇಲ್ಲದಿದ್ದರೆ ನಿನ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತೇನೆ’ ಎಂದು ಬೆದರಿಸುತ್ತಿದ್ದಾರೆ. ಈ ಕಾರಣದಿಂದ ನನಗೆ ಭಯ, ಮಾನಸಿಕ ಒತ್ತಡ ಹಾಗೂ ಅವಮಾನ ಉಂಟಾಗುತ್ತಿದೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.



