Kannada NewsKarnataka NewsLatestPolitics

*ಶೃಂಗೇರಿ ಕ್ಷೇತ್ರದ ಪೋಸ್ಟಲ್ ಬ್ಯಾಲೆಟ್​ ಮತಗಳನ್ನು ಮರುಪರಿಶೀಲಿಸಿ ಹೊಸದಾಗಿ ಫಲಿತಾಂಶ ಪ್ರಕಟಿಸಿ: ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಆದೇಶ*

ಪ್ರಗತಿವಾಹಿನಿ ಸುದ್ದಿ: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾನವಾಗಿರುವ ಒಟ್ಟು ಪೋಸ್ಟಲ್ ಬ್ಯಾಲೆಟ್​ನಲ್ಲಿ ತಿರಸ್ಕೃತಗೊಂಡಿರುವ 279 ಮತಗಳನ್ನು ಮರು ಪರಿಶೀಲನೆ ನಡೆಸಿ, ಹೊಸದಾಗಿ ಫಲಿತಾಂಶ ಪ್ರಕಟ ಮಾಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಶೃಂಗೇರಿ ಕ್ಷೇತ್ರದಿಂದ ಜಯ ಗಳಿಸಿರುವ ಟಿ.ಡಿ.ರಾಜೇಗೌಡ ಅವರ ಆಯ್ಕೆ ಅಸಿಂಧು ಎಂದು ಘೋಷಣೆ ಮಾಡಬೇಕು ಎಂದು ಪರಾಜಿತ ಅಭ್ಯರ್ಥಿ ಡಿ.ಎನ್. ಜೀವರಾಜ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ನಟರಾಜ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

Home add -Advt

ಮುಂದಿನ ಎರಡು ವಾರಗಳಲ್ಲಿ ತಿರಸ್ಕೃತ 279 ಪೋಸ್ಟಲ್ ಬ್ಯಾಲೆಟ್​ನ ಮತಗಳನ್ನು ಮರು ಪರಿಶೀಲನೆ ನಡೆಸಬೇಕು. ಈ ಸಂದರ್ಭದಲ್ಲಿ ಚುನಾವಣಾಧಿಕಾರಿಗಳು ಕೈಪಿಡಿಯ ಮಾರ್ಗಸೂಚಿಗಳು-2023ರ ಮಾರ್ಗಸೂಚಿ 15(14)(7)ನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ತಿರಸ್ಕೃತ ಮತಗಳ ಮರು ಪರಿಶೀಲನೆ ಸಂದರ್ಭದಲ್ಲಿ ಅರ್ಜಿದಾರರು ಮತ್ತು ಪ್ರತಿವಾದಿ ರಾಜೇಗೌಡ ಅವರಿಗೆ ಹಂಚಿಕೆಯಾಗಿರುವ ಮತಗಳಲ್ಲಿ ಯಾವುದೇ ಗಣನೀಯ ಲೋಪ ಕಂಡುಬಂದಲ್ಲಿ ಎಲ್ಲ ಪೋಸ್ಟ್ ಬ್ಯಾಲೆಟ್​ಗಳ ಮತಗಳನ್ನು ಮರು ಎಣಿಕೆ ಮಾಡಿ ಹೊಸದಾಗಿ ಫಲಿತಾಂಶ ಪ್ರಕಟಿಸಬೇಕು ಎಂದು ಪೀಠ ತಿಳಿಸಿದೆ.

ಜತೆಗೆ, ಆದೇಶದ ಪ್ರತಿಯನ್ನು ಕೇಂದ್ರ ಚುನಾವಣಾ ಆಯೋಗದ ಕಾರ್ಯದರ್ಶಿ, ಜಿಲ್ಲಾ ಮುಖ್ಯ ಚುನಾವಣಾಧಿಕಾರಿಗಳು ಮತ್ತು ಶೃಂಗೇರಿಯ ಚುನಾವಣಾಧಿಕಾರಿಯವರಿಗೆ ಇ-ಮೇಲ್ ಇಲ್ಲವೇ ಸ್ಪೀಡ್ ಪೋಸ್ಟ್ ಮೂಲಕ ರವಾನಿಸಬೇಕು ಎಂದು ಹೈಕೋರ್ಟ್ ರಿಜಿಸ್ಟ್ರಾರ್​ಗೆ ಸೂಚನೆ ನೀಡಿದೆ.

ಆದೇಶ ಪ್ರಕಟವಾಗುತ್ತಿದ್ದಂತೆ ರಾಜೇಗೌಡ ಪರ ವಕೀಲರು, ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಚುನಾವಣೆ ಫಲಿತಾಂಶವನ್ನು ರದ್ದುಗೊಳಿಸಿಲ್ಲ ಎಂದು ತಿಳಿಸಿತು. ಅಲ್ಲದೆ, ಈ ಆದೇಶಕ್ಕೆ ಎರಡು ವಾರಗಳ ಕಾಲ ತಡೆ ನೀಡಿ ಆದೇಶಿಸಿತು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಿಂದ ಡಿ.ಟಿ.ರಾಜೇಗೌಡ 201 ಮತಗಳಿಂದ ಜಯಶಾಲಿಯಾಗಿದ್ದರು. ಆದರೆ, ಪೋಸ್ಟಲ್ ಬ್ಯಾಲೆಟ್​ನಲ್ಲಿ 1811 ಮತದಾನ ನಡೆದಿದ್ದು, ಈ ಮತಗಳಲ್ಲಿ 279 ಮತಗಳನ್ನು ತಿರಸ್ಕರಿಸಲಾಗಿತ್ತು. ಈ ಸಂಬಂಧ ಪೋಸ್ಟಲ್ ಬ್ಯಾಲೆಟ್​ನಲ್ಲಿ ಬಂದಿದ್ದ ಮತಗಳ ಮರು ಪರಿಶೀಲನೆಗೆ ಕೋರಿ ಪರಾಜಿತ ಅಭ್ಯರ್ಥಿ ಜೀವರಾಜ್ ಸಲ್ಲಿಸಿದ್ದ ಮನವಿಯನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದರು. ಈ ಕ್ರಮ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

Related Articles

Back to top button