*ಖಾನಾಪುರದಲ್ಲಿ ಕಾಡಾನೆಗಳು ಪ್ರತ್ಯಕ್ಷ: ರೈತರ ಬೆಳೆ ನಾಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಖಾನಾಪುರ ತಾಲೂಕಿನಲ್ಲಿ ಕಾಡಾನೆ ದಾಳಿಗೆ ರೈತರು ಕಂಗಾಲಾಗಿದ್ದಾರೆ. ಇತ್ತ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಕಾಡಿಗೆ ಓಡಿಸಲು ಹರಸಾಹಸ ಪಡುತ್ತಿದ್ದಾರೆ.
ಖಾನಾಪುರ ತಾಲೂಕಿನ ಪಾಲಿ, ಹೆಮ್ಮಡಗಾ, ಅಬನಾಳಿ, ಡೊಂಗರಗಾವ, ಶಿರೋಳಿವಾಡಾ ಭಾಗದಲ್ಲಿ ಒಂದು ವಾರದಿಂದ ಆನೆಗಳ ಹಿಂಡು ರೈತರ ಬೆಳೆ ನಾಶ ಮಾಡುತ್ತಿವೆ.
ಆನೆಗಳ ಓಡಾಟದಿಂದ ಪಾಲಿ ಗ್ರಾಮದ ಭತ್ತದ ಗದ್ದೆಗಳಲ್ಲಿ ಬುಧವಾರ ರಾತ್ರಿ 7 ಆನೆಗಳು ಪ್ರತ್ಯಕ್ಷವಾಗಿವೆ. ಆನೆಗಳನ್ನು ಕಾಡಿಗೆ ಓಡಿಸಲು ಇಡೀ ರಾತ್ರಿ ಅರಣ್ಯಾಧಿಕಾರಿಗಳಿಂದ ಕೂಬಿಂಗ್ ನಡೆಸಲಾಗಿದೆ. ಒಂಟಿಸಲಗ, ಮರಿ ಆನೆ ಸೇರಿ ಏಳು ಆನೆಗಳು ಒಂದೆ ಹಿಂಡಿನಲ್ಲಿ ಇವೆ.
ಎಸಿಎಫ್ ಬಸವರಾಜ ವಾಳದ, ಆರ್‌ಎಫ್‌ಒ ಸಯ್ಯದಸಾಬ್ ನದಾಫ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಪಟಾಕಿ ಹಾಗೂ ಮದ್ದು ಸಿಡಿಸಿ ಆನೆಗಳನ್ನು ಬೆನ್ನಟ್ಟಿದರೂ ಗಜಪಡೆ ಕಾಡಿಗೆ ಮರಳುತ್ತಿಲ್ಲ. ಆನೆಗಳ ಚಲನವಲನ ಪತ್ತೆಗೆ ಡ್ರೋನ್ ಮೂಲಕ ಹಾಗೂ ಅರಣ್ಯ ಸಿಬ್ಬಂದಿಯಿಂದ ನಿರಂತರ ಕಣ್ಗಾವಲು ಇಡಲಾಗಿದೆ.
ಆಹಾರ ಅರಸಿ ಹಳಿಯಾಳ, ಕ್ಯಾಸಲರಾಕ್, ಜಗಳಪೇಟೆ, ತಿನೈಘಾಟ್, ಗಣೇಶಗುಡಿ ಭಾಗದಿಂದ ಅನೆಗಳು ಬಂದಿರುವ ಶಂಕೆ ವ್ಯಕ್ತವಾಗಿದೆ. ಪಾಲಿ ಬಳಿ ರಸ್ತೆ ಬದಿಯಲ್ಲಿ ಆನೆಗಳನ್ನು ಕಂಡು ಬೈಕ್ ಸವಾರರು ಆತಂಕಗೊಂಡ ಘಟನೆಯೂ ನಡೆದಿದೆ.
ಅರಣ್ಯಾಧಿಕಾರಿಗಳ ಗಮನಕ್ಕೆ ತಾರದೇ ಆನೆಗಳ ಬಳಿ ಹೋಗುವುದು, ಕೂಗಾಟ ಅಥವಾ ಪಟಾಕಿ ಸಿಡಿಸುವ ಸಾಹಸ ಮಾಡಬಾರದು. ಆನೆಗಳ ಹಿಂಡಿನಿಂದ ಸಾರ್ವಜನಿಕರಿಗೆ ಅರಣ್ಯ ಇಲಾಖೆ ಎಚ್ಚರಿಕೆ ವಹಿಸಲು ಡಿಸಿಎಫ್ ಎನ್.ಇ. ಕ್ರಾಂತಿ ಮನವಿ ಮಾಡಿದ್ದಾರೆ.



