* ‘ನನ್ನ ಕ್ಷೇತ್ರಕ್ಕೆ ಮತ್ತೆ ಬಂದರೆ ತಮ್ಮನಿಗೆ ಬಿ ಫಾರಂ ಕೊಡಿಸುತ್ತೇನೆʼ*: *ರಕ್ಷಾ ರಾಮಯ್ಯಗೆ ಪ್ರದೀಪ್ ಈಶ್ವರ್ ಸವಾಲು*

ಪ್ರಗತಿವಾಹಿನಿ ಸುದ್ದಿ: ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ರಾಜಕಾರಣದಲ್ಲಿ ಮತ್ತೆ ಭಿನ್ನಮತದ ಸ್ವರ ಕೇಳಿಬಂದಿದೆ. ಬೆಂಗಳೂರಿನಿಂದ ಬಂದು ತಮ್ಮ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಶಾಸಕ ಪ್ರದೀಪ್ ಈಶ್ವರ್, ರಕ್ಷಾ ರಾಮಯ್ಯ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪ್ರದೀಪ್ ಈಶ್ವರ್ ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲವು ಬಾರಿ ತಮ್ಮ ಕ್ಷೇತ್ರಕ್ಕೆ ಬರಬೇಡಿ ಎಂದು ಹೇಳಿದ್ದರೂ ರಕ್ಷಾ ರಾಮಯ್ಯ ಬರುತ್ತಿದ್ದಾರೆ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ.
ತಮ್ಮ ಕ್ಷೇತ್ರಕ್ಕೆ ಬಂದು ಬಿಜೆಪಿಯವರೊಂದಿಗೆ ಸೇರಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಶಾಸಕ, ಬೆಂಗಳೂರಿನಿಂದ ಬಂದು ಕ್ಷೇತ್ರದ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಿದರೆ ಸುಮ್ಮನೆ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಮುಂದಿನ ಲೋಕಸಭಾ ಎಲೆಕ್ಷನ್ ಬಗ್ಗೆಯೂ ಪ್ರದೀಪ್ ಈಶ್ವರ್ ವಿಡಿಯೋದಲ್ಲಿ ಪ್ರಸ್ತಾಪಿಸಿದ್ದಾರೆ. ರಕ್ಷಾ ರಾಮಯ್ಯ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಬರುವುದನ್ನು ಮುಂದುವರಿಸಿದರೆ, ಮುಂದಿನ ಲೋಕಸಭಾ ಎಲೆಕ್ಷನ್ನಲ್ಲಿ ತಮ್ಮ ಸಹೋದರನಿಗೆ ಪಕ್ಷದ ಬಿ ಫಾರಂ ಕೊಡಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಸಭೆಯಲ್ಲಿ ರಕ್ಷಾ ರಾಮಯ್ಯ ಅಭಿಮಾನಿಗಳು ಅಥವಾ ಬೆಂಬಲಿಗರು ಇದ್ದರೆ ಈ ಸಂದೇಶವನ್ನು ರಕ್ಷಾ ರಾಮಯ್ಯಗೆ ತಲುಪಿಸುವಂತೆ ಪ್ರದೀಪ್ ಈಶ್ವರ್ ಹೇಳಿದ್ದಾರೆ. ಪ್ರದೀಪ್ ಈಶ್ವರ್ ಮಾಡಿರುವ ಆರೋಪಗಳು ಮತ್ತು ಸವಾಲಿನ ಕುರಿತು ರಕ್ಷಾ ರಾಮಯ್ಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಿಕ್ಕಬಳ್ಳಾಪುರ ಕಾಂಗ್ರೆಸ್ನ ಆಂತರಿಕ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




