
ಐಟಿ ಪಾರ್ಕ್, ಕ್ರೀಡಾ ನಗರ, 50 ಸಾವಿರ ನಿವೇಶನ ಹಂಚಿಕೆ: ಸಿಎಂ ಡಿ ಕೆ ಶಿವಕುಮಾರ್
ಪ್ರಗತಿವಾಹಿನಿ ಸುದ್ದಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ 50 ಸಾವಿರ ನಿವೇಶನ ಹಂಚಿಕೆ, 30 ಎಕರೆ ಪ್ರದೇಶದಲ್ಲಿ ಐಟಿ ಪಾರ್ಕ್ ಅಭಿವೃದ್ಧಿ, ಕೀಡೆಗೆ ಪ್ರೋತ್ಸಾಹ ನೀಡಲು ಹಡಗಿಲ ಹಾರುತಿ ಗ್ರಾಮದಲ್ಲಿ ಕ್ರೀಡಾ ನಗರ ಸ್ಥಾಪನೆ, ಕೋಟಿ ವೃಕ್ಷ ಅಭಿಯಾನ ಸೇರಿದಂತೆ 10 ಹೊಸ ಕಾರ್ಯಕ್ರಮಗಳನ್ನು ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಅಂಗವಾಗಿ ಸಿಎಂ ಡಿ ಕೆ ಶಿವಕುಮಾರ್ ಅವರು ಘೋಷಿಸಿದರು.
ಕಲಬುರ್ಗಿಯಲ್ಲಿ 79ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಸಿಎಂ ಡಿ ಕೆ ಶಿವಕುಮಾರ್ ಅವರು ಗುರುವಾರ ಧ್ವಜಾರೋಹಣ ನೆರವೇರಿಸಿದರು.
“ಕಲ್ಯಾಣ ಕರ್ನಾಟಕ ಭಾಗದಲ್ಲಿ ಗಂಭೀರ ಸಮಸ್ಯೆಯಾದ ರಕ್ತಹೀನತೆ ಆರೋಗ್ಯ ತಡೆ ಯೋಜನೆ, ಅಪರಾಧ ತಡೆ, ಸಂಚಾರ ನಿಯಂತ್ರಣ ಕ್ಕೆ ಎಐ ಆಧಾರಿತ ಸಿಸಿಟಿವಿ ಕ್ಯಾಮೆರಾ, ಸೇಡಂ ರಸ್ತೆಯ ರಿಂಗ್ ರೋಡ್‌ನಲ್ಲಿ ಮೇಲ್ಸೇತುವೆ ನಿರ್ಮಾಣ, ಹೊಸ ಪೆರಿಫೆರಲ್ ರಿಂಗ್ ರಸ್ತೆಗೆ ಯೋಜನಾ ವರದಿ, ಸ್ಟಾರ್ಟ್‌ಅಪ್‌ಗಳು ಮತ್ತು ಯುವ ಉದ್ಯಮಿಗಳನ್ನು ಉತ್ತೇಜಿಸಲು ಕ್ರಿಯಾ (KRIYA) (Kalaburagi Research, Innovation and Youth Accelerator) ಸ್ಥಾಪನೆ, ಕಲ್ಯಾಣ ಕರ್ನಾಟಕ ಎಕಾನಮಿ ಮಿಷನ್ ಸ್ಥಾಪನೆ, ಜೈವಿಕ ಆರ್ಥಿಕ ಮಿಷನ್, 50 ಕೋಟಿ ವೆಚ್ಚದಲ್ಲಿ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ ಈ ಹೊಸ ಘೋಷಣೆಗಳಲ್ಲಿ ಒಳಗೊಂಡಿದೆ” ಎಂದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತಿವರ್ಷ 5 ಸಾವಿರ ಕೋಟಿ
“ಬೆಂಗಳೂರು ಕರ್ನಾಟಕದ ಕಿರೀಟ. ಕಲ್ಯಾಣ ಕರ್ನಾಟಕ ಶಕ್ತಿಪೀಠ. ಕಲ್ಯಾಣ ಕರ್ನಾಟಕದ ಕಲ್ಯಾಣವೇ ನಮ್ಮ ಆದ್ಯತೆ. ಕಲ್ಯಾಣ ಕರ್ನಾಟಕದಲ್ಲಿ ತುಂಗಭದ್ರಾ, ಕೃಷ್ಣೆಯಂತೆ ಅಭಿವೃದ್ದಿ ತುಂಬಿ ಹರಿಯುತ್ತಿದೆ. ಈ ಭಾಗದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಪ್ರತಿವರ್ಷ 5 ಸಾವಿರ ಕೋಟಿ ನೀಡಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಯಿಂದ ಸಮಗ್ರ ಕರ್ನಾಟಕದ ಪ್ರಗತಿ” ಎಂದು ಹೇಳಿದರು.
32 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿ
“371 ಜೆ ಜಾರಿಯಾದ ನಂತರ ಅದರಲ್ಲಿ 79,383 ಹುದ್ದೆಗಳನ್ನು ಈಗಾಗಲೇ ಭರ್ತಿ ಮಾಡಲಾಗಿದೆ. ಹೊಸದಾಗಿ ಭರ್ತಿ ಮಾಡುತ್ತಿರುವ 72 ಸಾವಿರ ಹುದ್ದೆಗಳಲ್ಲಿ 32 ಸಾವಿರ ಹುದ್ದೆಗಳು ಈ ಭಾಗದ ಯುವಜನರಿಗೆ ದೊರೆಯಲಿವೆ. ಕೆಕೆಆರ್‌ಡಿಬಿಗೆ 2013-14ನೆೇ ರಿಂದ 2025-26ನೆೇ ಸಾಲಿನವರೆಗೆ 24,780 ಕೋಟಿ ಅನುದಾನ ನೀಡಲಾಗಿದೆ. ಇದರಲ್ಲಿ 14,000 ಕೋಟಿ ರೂ.ಅನುದಾನ ಖರ್ಚು ಮಾಡಲಾಗಿದೆ. 41,103 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 32,985 ಕಾಮಗಾರಿಗಳು ಪೂರ್ಣಗೊಂಡಿವೆ. 8,118 ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ” ಎಂದರು.
ಕಾಂಗ್ರೆಸ್ ಪಕ್ಷ ಕಲ್ಯಾಣ ಕರ್ನಾಟಕದ ವಿಮೋಚನೆಗೆ ರಕ್ತ, ಬೆವರು ಹರಿಸಿದೆ
“ನಮ್ಮೊಂದಿಗೆ ನೀವು, ನಿಮ್ಮೊಂದಿಗೆ ನಾವು ಸೇರಿ ಮುನ್ನಡೆಯುವುದೇ ಅಭಿವೃದ್ಧಿ. ಬಸವಣ್ಣನವರ ಹೋರಾಟದ ನೆಲ. ಸಮಾನತೆ, ಮಾನವೀಯತೆ, ಸಹಬಾಳ್ವೆಯ ಸಂದೇಶ ನೀಡಿದ ಪುಣ್ಯಭೂಮಿ ಕಲ್ಯಾಣ ಕರ್ನಾಟಕ. ಆಗ ಬಾ, ಈಗ ಬಾ, ಹೋಗಿ ಬಾ ಎನ್ನದೇ, ಈಗಲೇ ಕೊಡುವುದೇ ಮಾನವಧರ್ಮ ಎಂದು ವಚನಕಾರ ಸರ್ವಜ್ಞ ಹೇಳಿದ್ದಾರೆ. ನೀರಿನಿಂದ ಸ್ನಾನ ಮಾಡಿದವನು ಬಟ್ಟೆ ಬದಲಾಯಿಸುತ್ತಾನೆ.ಬೆವರಿನಿಂದ ಸ್ನಾನ ಮಾಡಿದವನು ಇತಿಹಾಸ ನಿರ್ಮಿಸುತ್ತಾನೆ ಎಂದು ಸಂತ ಸೇವಾಲಾಲ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಕಲ್ಯಾಣ ಕರ್ನಾಟಕದ ವಿಮೋಚನೆಗೆ ರಕ್ತ, ಬೆವರು ಹರಿಸಿದೆ” ಎಂದರು.
“ಇಡುವ ಹೆಜ್ಜೆ ಚಿಕ್ಕದಿರಬಹುದು. ಆದರೆ ಆಲೋಚನೆ ದೊಡ್ಡದಿರಬೇಕು. ಸರ್ದಾರ್ ವಲ್ಲಭಾಯಿ ಪಟೇಲ್, ನೆಹರು ಅವರು ಕಲ್ಯಾಣ ಕರ್ನಾಟಕವನ್ನ ಕಾಪಾಡಿದರು. ಕಟ್ಟಡಗಳ ನಿರ್ಮಾಣದ ಜೊತೆಗೆ ಕಟ್ಟ ಕಡೆಯ ವ್ಯಕ್ತಿಯ ನೆಮ್ಮದಿ ಬದುಕೇ ಅಭಿವೃದ್ಧಿ ಈ ನಿಟ್ಟಿನಲ್ಲಿ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಅವರು ಈ ಭಾಗದ ಅಭಿವೃದ್ಧಿಗೆ ಮುನ್ನುಡಿ ಬರೆದರು. 1990 ರಲ್ಲಿ ಮಾಜಿ ಸಿಎಂ ಧರ್ಮಸಿಂಗ್ ಅವರ ನೇತೃತ್ವದಲ್ಲಿ ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಯಿತು. ಹೀಗೆ ಪ್ರಾರಂಭವಾದ ಅಭಿವೃದ್ಧಿ ಪರ್ವ ಮುಂದುವರೆಯುತ್ತಿದೆ” ಎಂದರು.
371 ಜೆ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ
“ನಮ್ಮ ಅತಿ ದೊಡ್ಡ ಸಂಪನ್ಮೂಲಗಳು ನಮ್ಮ ಹೃದಯದಲ್ಲಿ ಇರುತ್ತವೆ. ಅದನ್ನು ಕೊಡುವ ದೊಡ್ದ ಮನಸು ಮಾಡಬೇಕು. 371 ಜೆ ಸೋನಿಯಾ ಗಾಂಧಿ ಅವರು ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ. ಸೋನಿಯಾ ಗಾಂಧೀ ಅವರು ಈ ತಿದ್ದುಪಡಿಗೆ ಲೋಕಸಭೆಯಲ್ಲಿ 404 ಸದಸ್ಯರ ಬೆಂಬಲ ಕೊಡಿಸಿದರು” ಎಂದು ಹೇಳಿದರು.
“ಸತ್ಯಕ್ಕೆ ಸಮನಿಲ್ಲ. ಹಸ್ತಕ್ಕಿಂತ ಅಧಿಕ ಹಿತವಿಲ್ಲ. ಈ ಹಸ್ತದಿಂದಲೇ ದೇಶದ ಅಭಿವೃದ್ಧಿ ಹಾಗೂ ಈ ಕರ್ನಾಟಕ ಅಭಿವೃದ್ಧಿ. ಈ ಭಾಗದ ಯುವಕರು 371 ಜೆ ತಿದ್ದುಪಡಿಯ ಕಾರಣಕ್ಕೆ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ ನಾವು ಮತಕ್ಕಾಗಿ, ಅಲ್ಲ ರಾಜ್ಯದ ಹಿತಕ್ಕಾಗಿ ಕೆಲಸ ಮಾಡುತ್ತೇವೆ. ಆರ್ಟಿಕಲ್ 371 ಜೆ ಜಾರಿಯಾಗಿ 12 ವರ್ಷಗಳಾಗಿವೆ. ಅಲ್ಲಿಂದ ಇಲ್ಲಿಯವರೆಗೆ ಸಾಕಷ್ಟು ಬದಲಾವಣೆಗಳು, ಅಭಿವೃದ್ಧಿ ಕೆಲಸಗಳು ಈ ಭಾಗದಲ್ಲಿ ನಡೆದಿವೆ. ಮಲ್ಲಿಕಾರ್ಜುನ ಖರ್ಗೆ ಅವರು ಅತೀ ದೊಡ್ಡ ಇಎಸ್ ಐ ಆಸ್ಪತ್ರೆ ಕಟ್ಟಿಸಿದ್ದಾರೆ. ಕಲ್ಯಾಣ ಕರ್ನಾಟಕ ಹೆಲ್ತ್ ಹಬ್ ಆಗಿ ಬೆಳೆಯುತ್ತಿದೆ. ಇದರಿಂದ ಈ ಭಾಗದ ಜನರು ಬೆಂಗಳೂರು, ಹೈದರಾಬಾದ್ ಗೆ ಹೋಗುವುದು ತಪ್ಪುತ್ತಿದೆ” ಎಂದು ಹೇಳಿದರು.
“ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೇ ಸಚಿವರಾಗಿದ್ದಾಗ ಗುಲ್ಬರ್ಗ – ವಾಡಿ ಹೊಸ ರೈಲು ಮಾರ್ಗ ನೀಡಿದರು. ಇಂದಿರಾಗಾಂಧಿ ತಾಯಿ- ಮಕ್ಕಳ ಆಸ್ಪತ್ರೆ, ಕಿದ್ವಾಯಿ, ಜಯದೇವ ಆಸ್ಪತ್ರೆಗಳು ಜನರ ಸೇವೆಗೆ ಸಿದ್ದವಾಗಿವೆ. ನಾವೆಲ್ಲರೂ ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿದ ಅಭಿವೃದ್ಧಿಯ ಕ್ರಾಂತಿಯನ್ನು ಎಲ್ಲರೂ ಸ್ಮರಿಸಿಕೊಳ್ಳಬೇಕು” ಎಂದು ಹೇಳಿದರು.
“ಬಂಜಾರರನ್ನು ಪರಿಶಿಷ್ಟ ಪಟ್ಟಿಗೆ ಸೇರ್ಪಡೆ ಮಾಡಿದ್ದು ಕಾಂಗ್ರೆಸ್ ಪಕ್ಷ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೈ ಹಿಡಿದಿದ್ದು ಕಲ್ಯಾಣ ಕರ್ನಾಟಕ. ನಮ್ಮ ಕೈಹಿಡಿದ ನಿಮ್ಮನ್ನು ಕೈಬಿಡುವ ಪ್ರಶ್ನೆಯೇ ಇಲ್ಲ” ಎಂದರು.
“ಈ ಭಾಗದ ರಸ್ತೆಗಳ ಸುಧಾರಣೆಗೆ ಕಲ್ಯಾಣಪಥ ಯೋಜನೆ ರೂಪಿಸಿದ್ದೇವೆ. 38 ವಿಧಾನಸಭಾ ಕ್ಷೇತ್ರಗಳಲ್ಲಿ 1,150 ಕಿ.ಮೀ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 1 ಸಾವಿರ ಕೋಟಿ ನೀಡಲಾಗಿದೆ. ಪ್ರತಿ ಕ್ಷೇತ್ರಕ್ಕೆ 120 ಕೋಟಿ ತೆಗೆದಿರಿಸಿದ್ದೇವೆ. ಕಲಬುರಗಿಯಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ₹11,770 ಕೋಟಿ ಮೊತ್ತದ ಬೃಹತ್ ಯೋಜನೆಗಳಿಗೆ ನಿರ್ಧಾರ ಮಾಡಿದ್ದೇವೆ” ಎಂದರು.



