Kannada NewsKarnataka NewsPolitics
*ಕಲ್ಯಾಣ ಕರ್ನಾಟಕ ಉತ್ಸವ: ಹತ್ತು ಹೊಸ ಘೋಷಣೆ ಮಾಡಿದ ಸಿಎಂ ಡಿ.ಕೆ ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ಸಿಎಂ ಡಿ ಕೆ ಶಿವಕುಮಾರ್ ಅವರು 79ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಕಲಬುರ್ಗಿ ನಗರದಲ್ಲಿನ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆಗೆ ಗುರುವಾರ ಮಾಲಾರ್ಪಣೆ ಮಾಡಿದರು. ಸಚಿವರಾದ ಪ್ರಿಯಾಂಕ್ ಖರ್ಗೆ, ಶಾಸಕ ಅಲ್ಲಮಪ್ರಭು ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.
ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮಾಅತನಾಡಿದ ಸಿಎಂ ಸಿಎಂ ಡಿ ಕೆ ಶಿವಕುಮಾರ್ ಹೊಸ ಘೋಷಣೆಗಳನ್ನು ಮಾಡಿದರು. ಅವು ಈ ಕೆಳಗಿನಂತಿವೆ.
- ಕಲ್ಯಾಣ ಕರ್ನಾಟಕ ಎಕಾನಮೀ ಮಿಷನ್ (KKEM):
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೈಗಾರಿಕಾ ಬೆಳವಣಿಗೆ ಮತ್ತು ಹೂಡಿಕೆಗೆ ವೇಗ ನೀಡಲು ಸರ್ಕಾರವು ಸೆಕ್ಷನ್ 8 ಕಂಪನಿಯಾಗಿ ಕಲ್ಯಾಣ ಕರ್ನಾಟಕ ಎಕಾನಮೀ ಮಿಷನ್ ಸ್ಥಾಪಿಸಲಿದೆ. ಈ ಮಿಷನ್ ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಈ ಪ್ರದೇಶದಲ್ಲಿ ಹೊಸ ಆರ್ಥಿಕ ಅವಕಾಶಗಳನ್ನು ಸೃಷ್ಟಿಸಲು ನೆರವಾಗಲಿದೆ. - ಜೈವಿಕ ಆರ್ಥಿಕ ಮಿಷನ್ (Bio Economy Mission):
ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ಮೂಲಕ ರೈತರ ಆದಾಯ ಹೆಚ್ಚಿಸಲು ಸರ್ಕಾರವು ಜೈವಿಕ ಆರ್ಥಿಕ ಮಿಷನ್ ಸ್ಥಾಪಿಸಲಿದೆ. ತೊಗರಿ ಬೇಳೆ, ಕಮಲಾಪುರ ಬಾಳೆಹಣ್ಣು, ಒಣದ್ರಾಕ್ಷಿ ಮತ್ತು ಸಿರಿಧಾನ್ಯಗಳು ಸೇರಿದಂತೆ ಈ ಪ್ರದೇಶದ ಪ್ರಮುಖ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಇದು ಒತ್ತು ನೀಡಲಿದೆ. - ರಕ್ತಹೀನತೆ (Anaemia) ವಿರುದ್ಧ ವಿಶೇಷ ಅಭಿಯಾನ:
ಈ ಪ್ರದೇಶದಲ್ಲಿ ರಕ್ತಹೀನತೆಯ ಪ್ರಮಾಣವನ್ನು ಕಡಿಮೆ ಮಾಡಲು ಸರ್ಕಾರವು ಮುಂದಿನ ಎರಡು ವರ್ಷಗಳ ಕಾಲ ತಪಾಸಣೆ, ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ವಿಶೇಷ ಅಭಿಯಾನ ಕೈಗೊಳ್ಳಲಿದೆ. ವಿಶೇಷವಾಗಿ ಗರ್ಭಿಣಿಯರು, ಹದಿಹರೆಯದವರು ಹಾಗೂ ಹಾಲುಣಿಸುವ ತಾಯಂದಿರ ಮೇಲೆ ಹೆಚ್ಚಿನ ಗಮನ ಹರಿಸಲಾಗುವುದು. - ಕಲಬುರಗಿ ನಗರದ ಮೂಲಸೌಕರ್ಯ:
ವೇಗವಾಗಿ ಬೆಳೆಯುತ್ತಿರುವ ಕಲಬುರಗಿ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಸೇಡಂ ರಸ್ತೆಯ ರಿಂಗ್ ರೋಡ್‌ನಲ್ಲಿ ಮೇಲ್ಸೇತುವೆ ನಿರ್ಮಿಸಲಾಗುವುದು. ಹೊಸ ಪೆರಿಫೆರಲ್ ರಿಂಗ್ ರೋಡ್ ಕೂಡ ಯೋಜನೆಯಲ್ಲಿದ್ದು, ಅದರ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ಜೊತೆಗೆ ₹30 ಕೋಟಿ ವೆಚ್ಚದಲ್ಲಿ ನಗರಕ್ಕೆ ಪ್ರಮುಖ ಹಸಿರು ಮತ್ತು ಸಾರ್ವಜನಿಕ ವಿಹಾರ ತಾಣವಾಗಿ ಹೊಸ ಕೆರೆ ಮತ್ತು ಮನರಂಜನಾ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗುವುದು. - ನಿವೇಶನರಹಿತ ಕುಟುಂಬಗಳಿಗೆ 50,000 ನಿವೇಶನಗಳು:
ಸಮಗ್ರ ಮತ್ತು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯ ನಮ್ಮ ಬದ್ಧತೆಯ ಭಾಗವಾಗಿ, ಕಲಬುರಗಿ ಜಿಲ್ಲೆಯಲ್ಲಿ ನಿವೇಶನರಹಿತ ಕುಟುಂಬಗಳಿಗೆ 50,000 ವಸತಿ ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗುವುದು. - ಐಟಿ ಪಾರ್ಕ್ ಮತ್ತು KRIYA:
ಐಟಿ ಮತ್ತು ನಾವೀನ್ಯತಾ ಕ್ಷೇತ್ರದ ಬೆಳವಣಿಗೆಯನ್ನು ಬೆಂಗಳೂರಿನಾಚೆಗೂ ವಿಸ್ತರಿಸಲು ಕಲಬುರಗಿಯಲ್ಲಿ 30 ಎಕರೆ ಪ್ರದೇಶದಲ್ಲಿ ಐಟಿ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು. ಜೊತೆಗೆ ನಾವೀನ್ಯತೆ, ಸ್ಟಾರ್ಟ್‌ಅಪ್‌ಗಳು ಮತ್ತು ಯುವ ಉದ್ಯಮಿಗಳನ್ನು ಉತ್ತೇಜಿಸಲು KRIYA – Kalaburagi Research, Innovation and Youth Accelerator ಅನ್ನು ಸ್ಥಾಪಿಸಲಾಗುವುದು. - ಎಐ ಆಧಾರಿತ ಸಿಸಿಟಿವಿ ಜಾಲ:
ಸಾರ್ವಜನಿಕ ಸುರಕ್ಷತೆ, ಅಪರಾಧ ತಡೆ ಮತ್ತು ಸಂಚಾರ ನಿರ್ವಹಣೆಯನ್ನು ಬಲಪಡಿಸಲು ಕಲಬುರಗಿ ನಗರ ಹಾಗೂ ತಾಲೂಕು ಕೇಂದ್ರಗಳಲ್ಲಿ ಎಐ ಆಧಾರಿತ ಸಿಸಿಟಿವಿ ವ್ಯವಸ್ಥೆ ಅಳವಡಿಸಲಾಗುವುದು. ತ್ಯಾಜ್ಯ ನಿರ್ವಹಣೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ನಾಗರಿಕ ಸೇವೆಗಳ ಮೇಲ್ವಿಚಾರಣೆಯಲ್ಲಿಯೂ ಈ ಜಾಲವನ್ನು ಬಳಸಲಾಗುವುದು. - ಪ್ರವಾಸೋದ್ಯಮ ಮತ್ತು ಪಾರಂಪರಿಕ ತಾಣಗಳ ಅಭಿವೃದ್ಧಿ:
ಕಲಬುರಗಿ ಕೋಟೆ, ಶರಣಬಸವೇಶ್ವರ ದೇವಸ್ಥಾನ, ಖ್ವಾಜಾ ಬಂದೇ ನವಾಜ್ ದರ್ಗಾ, ಬುದ್ಧ ವಿಹಾರ, ಮಳಖೇಡ, ಸನ್ನತಿ ಮತ್ತು ಗಾಣಗಾಪುರವನ್ನು ಸಂಪರ್ಕಿಸುವ ಪುಣ್ಯ ಯಾತ್ರಾ ಸರ್ಕ್ಯೂಟ್ ಅಭಿವೃದ್ಧಿಪಡಿಸಲಾಗುವುದು. ಕೆಕೆಆರ್‌ಡಿಬಿ ಅನುದಾನದ ಮೂಲಕ ಮಳಖೇಡ, ನಾಗಾವಿ, ಕಾಳಗಿ ಮತ್ತು ಸನ್ನತಿಯ ಪಾರಂಪರಿಕ ತಾಣಗಳನ್ನೂ ಪುನರಾಭಿವೃದ್ಧಿಪಡಿಸಲಾಗುತ್ತಿದೆ. ಗಾಣಗಾಪುರವನ್ನು ಮೊದಲ ಹಂತದಲ್ಲಿ ₹50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಬಸವಣ್ಣನವರ ತತ್ವಗಳು ಮತ್ತು ವಚನ ಪರಂಪರೆಯನ್ನು ಯುವ ಪೀಳಿಗೆಗೆ ತಲುಪಿಸಲು ಕಲಬುರಗಿಯಲ್ಲಿ ವಚನ ಮಂಟಪವನ್ನು ಸ್ಥಾಪಿಸಲಾಗುವುದು. - ಕ್ರೀಡಾ ಮೂಲಸೌಕರ್ಯ:
ಮುಂದಿನ ಎರಡು ವರ್ಷಗಳಲ್ಲಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣವನ್ನು ಆಧುನಿಕ ಕ್ರೀಡಾ ಮೂಲಸೌಕರ್ಯದೊಂದಿಗೆ ಸಮಗ್ರವಾಗಿ ಪುನರಾಭಿವೃದ್ಧಿಪಡಿಸಲಾಗುವುದು. ಇಡೀ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಅನುಕೂಲವಾಗುವಂತೆ ಕ್ರಿಕೆಟ್ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಸರ್ಕಾರವು ಕೆಎಸ್‌ಸಿಎ ಜೊತೆ ಒಡಂಬಡಿಕೆ ಮಾಡಿಕೊಳ್ಳಲಿದೆ. ಕ್ರೀಡಾ ಶ್ರೇಷ್ಟತೆಯನ್ನು ಉತ್ತೆಜಿಸುವ ಉದ್ದೇಶದಿಂದ ಕಲಬುರಗಿ ತಾಲೂಕಿನ ಹಡಗಿಲ ಹಾರುತಿ ಗ್ರಾಮದಲ್ಲಿ “SPORTS CITY” ಸ್ಥಾಪಿಸಲಾಗುವುದು. ವಿವಿಧ ಕ್ರೀಡೆಗಳಿಗೆ ಅಂತರಾಷ್ತ್ರೀಯ ಮಟ್ಟದ ಒಳಾಂಗಣ ಮತ್ತು ಹೊರಾಂಗಣ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲಾಗುವುದು. - ಕೋಟಿ ವೃಕ್ಷ ಅಭಿಯಾನ:
ಹಸಿರು ಹೊದಿಕೆಯನ್ನು ಹೆಚ್ಚಿಸಲು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸುವ ಸಾಮರ್ಥ್ಯವನ್ನು ಬಲಪಡಿಸಲು ಮುಂದಿನ ಎರಡು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಾದ್ಯಂತ ಕೋಟಿ ವೃಕ್ಷ ಅಭಿಯಾನ ಕೈಗೊಳ್ಳಲಾಗುವುದು. ಒಂದು ಕೋಟಿ ಗಿಡಗಳನ್ನು ನೆಟ್ಟು ಪೋಷಿಸುವುದು ಇದರ ಗುರಿಯಾಗಿದೆ.




