
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ಭಾಗ್ಯನಗರದಲ್ಲಿ ನಡೆದಿದ್ದ 10 ಕುರಿಗಳ ಕಳ್ಳತನ ಪ್ರಕರಣವನ್ನು ತಿಲಕವಾಡಿ ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ನಗದು ಹಣ ಹಾಗೂ ಕಳ್ಳತನಕ್ಕೆ ಬಳಸಿದ್ದ ಕಾರು ಸೇರಿದಂತೆ ಒಟ್ಟು ₹3.17 ಲಕ್ಷ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ.
ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 110/2026ರ ಅಡಿಯಲ್ಲಿ ಬಿಎನ್ಎಸ್ ಕಲಂ 303(2)ರಂತೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆಹಾಕಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ತೆಂಗಿನಕೇರಿ ಗಲ್ಲಿಯ ಅಶ್ಫಾಕ್ ಖಾಜಾಸಾಬ ಸಾಟಿ (42), ಮೊಹಮ್ಮದ್ ಉಬೇದ ಫಯಾಜ್ ಡೋಣಿ (19) ಹಾಗೂ ಬುಕಾರಿ ಗಲ್ಲಿಯ ಮೊಹಮ್ಮದ್ ಕೈಫ್ ಆಯುಬ್ಖಾನ ಮಸರಗುಪ್ಪಿ (20) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ₹7 ಸಾವಿರ ನಗದು, ₹2 ಲಕ್ಷ ಮೌಲ್ಯದ ಸ್ವಿಫ್ಟ್ ಕಾರು ಹಾಗೂ ₹1.10 ಲಕ್ಷ ನಗದು ಸೇರಿದಂತೆ ಒಟ್ಟು ₹3,17,000 ಮೌಲ್ಯದ ಸ್ವತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ ನಗರ ಪೊಲೀಸ್ ಆಯುಕ್ತರು, ಡಿಸಿಪಿಗಳಾದ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಅಪರಾಧ ವಿಭಾಗದ ಅಧಿಕಾರಿಗಳು ಮತ್ತು ಮಾರ್ಕೆಟ್ ಉಪವಿಭಾಗದ ಎಸಿಪಿ ಅವರ ಮಾರ್ಗದರ್ಶನದಲ್ಲಿ ತಿಲಕವಾಡಿ ಠಾಣೆ ಇನ್ಸ್ಪೆಕ್ಟರ್ ಪರಶುರಾಮ ಪೂಜೇರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ವಿಶ್ವನಾಥ ಫಂಟಾಮಠ, ಅಡಿವೆಪ್ಪ ಕುಂಡೇದ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ಟೆಕ್ನಿಕಲ್ ಸೆಲ್ ಸಿಬ್ಬಂದಿ ಭಾಗವಹಿಸಿದ್ದರು. ಪೊಲೀಸರ ಕಾರ್ಯಾಚರಣೆಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿ ತಂಡಕ್ಕೆ ಬಹುಮಾನ ಘೋಷಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



