*ಕೆಎಲ್‌ಎಸ್‌ಜಿಐಟಿಯಲ್ಲಿ 3ಡಿ ಬಯೋಪ್ರಿಂಟಿಂಗ್ ಕುರಿತು ಎರಡು ದಿನಗಳ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್‌ಎಸ್ ಗೊಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಕೆಎಲ್‌ಎಸ್‌ಜಿಐಟಿ)ಯಲ್ಲಿ 3ಡಿ ಬಯೋಪ್ರಿಂಟಿಂಗ್ ತಂತ್ರಜ್ಞಾನ ಕುರಿತ ಎರಡು ದಿನಗಳ ಅಧ್ಯಾಪಕರ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಸೆಪ್ಟೆಂಬರ್ 28 ಮತ್ತು 29ರಂದು “3ಡಿ ಬಯೋಪ್ರಿಂಟಿಂಗ್‌ನ ಮುಂಚೂಣಿ ಕ್ಷೇತ್ರಗಳು: ತತ್ವಗಳು, ತಂತ್ರಜ್ಞಾನಗಳು ಮತ್ತು ಜೈವವೈದ್ಯಕೀಯ ಅನ್ವಯಿಕೆಗಳು” ವಿಷಯದಡಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೈದರಾಬಾದ್‌ನ ನ್ಯಾಷನಲ್ ಸೆಂಟರ್ ಫಾರ್ ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್ (NCAM) ಸಹಕಾರದೊಂದಿಗೆ, ಕೆಎಲ್‌ಎಸ್‌ಜಿಐಟಿಯ ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್ ಮತ್ತು ರಿವರ್ಸ್ ಎಂಜಿನಿಯರಿಂಗ್ ಸೆಂಟರ್ ಆಫ್ ಎಕ್ಸಲೆನ್ಸ್ ವತಿಯಿಂದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ 95 ಮಂದಿ ನೋಂದಾಯಿಸಿಕೊಂಡಿದ್ದು, ವೈದ್ಯಕೀಯ ಕ್ಷೇತ್ರದ ತಜ್ಞರು, ಸಂಶೋಧನಾ ವಿದ್ಯಾರ್ಥಿಗಳು, ವಿವಿಧ ಎಂಜಿನಿಯರಿಂಗ್ ವಿಭಾಗಗಳ ಅಧ್ಯಾಪಕರು ಹಾಗೂ ಕೈಗಾರಿಕಾ ಕ್ಷೇತ್ರದ ಪ್ರತಿನಿಧಿಗಳು ಭಾಗವಹಿಸಿದ್ದರು.
ಐಐಟಿ ಹೈದರಾಬಾದ್, ಎನ್‌ಐಟಿ ವರಂಗಲ್ ಸೇರಿದಂತೆ ವಿವಿಧ ಸಂಸ್ಥೆಗಳ ತಜ್ಞರು ಹಾಗೂ CELLINK Pvt. Ltd. ಮತ್ತು Avay Biosciences ಸಂಸ್ಥೆಗಳ ಉದ್ಯಮ ಕ್ಷೇತ್ರದ ಪರಿಣಿತರು ಉಪನ್ಯಾಸ ನೀಡಿದರು. 3ಡಿ ಬಯೋಪ್ರಿಂಟಿಂಗ್, ಜೈವಿಕ ವಸ್ತುಗಳು, ಟಿಷ್ಯೂ ಎಂಜಿನಿಯರಿಂಗ್ ಮತ್ತು ಜೈವವೈದ್ಯಕೀಯ ಅನ್ವಯಿಕೆಗಳ ಕುರಿತು ತಾಂತ್ರಿಕ ಹಾಗೂ ಪ್ರಾಯೋಗಿಕ ತರಬೇತಿ ಸತ್ರಗಳನ್ನು ನಡೆಸಲಾಯಿತು.
ಕಾರ್ಯಕ್ರಮದ ಮೂಲಕ 3ಡಿ ಬಯೋಪ್ರಿಂಟಿಂಗ್ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳು ಹಾಗೂ ಪ್ರಾಯೋಗಿಕ ಬಳಕೆಗಳ ಕುರಿತು ಭಾಗವಹಿಸಿದವರಿಗೆ ಸಮಗ್ರ ಮಾಹಿತಿ ದೊರೆಯಿತು. ಜತೆಗೆ ಜ್ಞಾನ ವಿನಿಮಯ, ಅಂತರ್‌ವಿಭಾಗೀಯ ಸಂವಾದ ಹಾಗೂ ಭವಿಷ್ಯದ ಸಂಶೋಧನೆ ಮತ್ತು ಕೈಗಾರಿಕಾ ಸಹಯೋಗಗಳಿಗೆ ವೇದಿಕೆ ಕಲ್ಪಿಸಲಾಯಿತು.
ಕಾರ್ಯಕ್ರಮದ ಸಂಯೋಜಕರಾಗಿ ಡಾ. ವಿವೇಕ್ ತಿವಾರೀ ಹಾಗೂ ಡಾ. ಅರುಣಕುಮಾರ್ ಪಿ. ಕಾರ್ಯನಿರ್ವಹಿಸಿದರು. ಕೆಎಲ್‌ಎಸ್‌ಜಿಐಟಿಯ ಯಾಂತ್ರಿಕ ಎಂಜಿನಿಯರಿಂಗ್ ವಿಭಾಗ, ಆಡಳಿತ ಮಂಡಳಿ ಹಾಗೂ ಎನ್‌ಸಿಎಎಂ, ಹೈದರಾಬಾದ್ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ಮತ್ತು ಪ್ರಾಯೋಜಕತ್ವ ನೀಡಿದವು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




