Kannada NewsKarnataka NewsPolitics

*ಸಿಎ ನಿವೇಶನ ವಿವಾದಕ್ಕೆ FIR ಏಕೆ ದಾಖಲಾಗಿಲ್ಲ*: *ಖರ್ಗೆ ಕುಟುಂಬದ ವಿರುದ್ಧ ಕುಮಾರಸ್ವಾಮಿ ಕಿಡಿ*

ಪ್ರಗತಿವಾಹಿನಿ ಸುದ್ದಿ: ಖರ್ಗೆ ಕುಟುಂಬ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಅಂಬೇಡ್ಕರ್‌, ಬುದ್ಧ, ಸಿದ್ಧಾರ್ಥ ಹೆಸರಿನಲ್ಲಿ ಖರ್ಗೆ ಕುಟುಂಬ ಮಾಡಿರುವ ಕೆಲಸವೇನು, ಸಾಮಾಜಿಕವಾಗಿ ದಲಿತ ಸಮಾಜದ ಉನ್ನತಿಗಾಗಿ ಯಾವುದೇ ಟ್ರಸ್ಟ್‌ ನಡೆಸಲಾಗುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.

ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಖರ್ಗೆ ಕುಟುಂಬಕ್ಕೆ ಸಂಬಂಧಿಸಿದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಬಿಬಿಎಂಪಿ/ಬಿಡಿಎ ನಿವೇಶನ ಹಂಚಿಕೆ ವಿಚಾರವನ್ನೂ ಪ್ರಸ್ತಾಪಿಸಿದರು. ಈ ಪ್ರಕರಣದಲ್ಲಿ ಅಕ್ರಮದ ಆರೋಪಗಳ ಬಗ್ಗೆ ಎಫ್‌ಐಆರ್‌ ಏಕೆ ದಾಖಲಾಗಿಲ್ಲ, ತನಿಖೆ ಏಕೆ ನಡೆದಿಲ್ಲ ಎಂದು ಪ್ರಶ್ನಿಸಿದ್ದಾರೆ.

‘ನಮ್ಮ ಮಕ್ಕಳ ಬಗ್ಗೆ ಮಾತನಾಡುತ್ತಿದ್ದಾರೆ. ಮೊದಲು ತಮ್ಮ ಕುಟುಂಬದ ದೋಸೆ ಏನಾಗಿದೆ ಎಂಬುದನ್ನು ನೋಡಿಕೊಳ್ಳಲಿ. ನಾವು ಯಾವುದೇ ರೀತಿಯ ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ’ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ ನಡೆಸಿದರು.

ವಿಪಕ್ಷಗಳ ವಿರುದ್ಧ ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಂಡು ಸುಳ್ಳು ಎಫ್‌ಐಆರ್‌ ದಾಖಲಿಸಲಾಗುತ್ತಿದೆ ಎಂದು ಆರೋಪಿಸಿರುವ ಹೆಚ್ ಡಿ ಕುಮಾರಸ್ವಾಮಿ, ಚುನಾವಣಾ ಆಯೋಗಕ್ಕೆ ನೀಡಬೇಕಾದ ದೂರುಗಳನ್ನು ಪೊಲೀಸರ ಮೂಲಕ ಪ್ರಕರಣಗಳಾಗಿ ದಾಖಲಿಸಲಾಗುತ್ತಿದೆ ಎಂದರು.

ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧವೂ ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ತಾವೇನು ಕಡಿಮೆ ಇಲ್ಲ ಎಂಬಂತೆ ಮುಖ್ಯಮಂತ್ರಿಗಳು ಬಿಂಬಿಸಿಕೊಳ್ಳುತ್ತಿದ್ದಾರೆ. ವಿಷನ್‌ ಮತ್ತು ರೋಡ್‌ಮ್ಯಾಪ್‌ ರೂಪಿಸಲು ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು. ಬಿಡಿಎ ಖಾಲಿ ನಿವೇಶನಗಳನ್ನು ಮಾರಾಟ ಮಾಡಿ ಎಷ್ಟು ಕಮಿಷನ್‌ ಪಡೆಯುತ್ತೀರಿ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಇಂಟಿಗ್ರೇಟೆಡ್‌ ಇಂಡಸ್ಟ್ರಿಯಲ್‌ ಕಾರಿಡಾರ್‌ ಹಾಗೂ ಟೌನ್‌ಶಿಪ್‌ ಯೋಜನೆಗಳನ್ನೂ ಟೀಕಿಸಿದರು.

2006ರಲ್ಲಿ ತಾವು ಐದು ಟೌನ್‌ಶಿಪ್‌ಗಳನ್ನು ನಿರ್ಮಿಸಲು ಮುಂದಾದಾಗ ವಿರೋಧ ವ್ಯಕ್ತಪಡಿಸಿದ್ದವರು ಈಗ ಅದೇ ರೀತಿಯ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು. ಪೆರಿಫೆರಲ್‌ ರಿಂಗ್‌ ರೋಡ್‌ ಯೋಜನೆಯಲ್ಲಿ ನೈಸ್‌ ಕಂಪನಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಮುಂದಾಗಿದೆ ಎಂಬ ಆರೋಪವನ್ನೂ ಮಾಡಿದರು.

ಇನ್ನು 2028ರ ವಿಧಾನಸಭೆ ಎಲೆಕ್ಷನ್‌ ಹಿನ್ನೆಲೆಯಲ್ಲಿ ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸಬೇಕು ಎಂಬುದರ ಕುರಿತು ಚರ್ಚೆ ನಡೆಯುವುದು ಸೂಕ್ತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿರುವುದನ್ನು ಕುಮಾರಸ್ವಾಮಿ ಸ್ವಾಗತಿಸಿದರು. ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದೆಯೇ ಎಂಬುದರ ಬಗ್ಗೆ ಇನ್ನೂ ಚರ್ಚೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ ಹೆಚ್‌ಡಿಕೆ ಸ್ಥಳೀಯ ಮಟ್ಟದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜವಾಗಿದ್ದು, ಟಿಕೆಟ್‌ ಯಾರಿಗೆ ಎಂಬ ಅಂತಿಮ ನಿರ್ಧಾರ ದೆಹಲಿಯಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button