
ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಹೈಕಮಾಂಡ್‌ಗೆ ಸ್ಟಿಂಗ್ ಆಪರೇಷನ್ ವಿಡಿಯೋ ನೀಡಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸ್ಥಾನ ಪಡೆದಿದ್ದಾರೆ ಎಂದು ಕಾಂಗ್ರೆಸ್‌ನಲ್ಲೇ ಹೇಳಲಾಗುತ್ತಿದೆ ಎಂಬ ಹೇಳಿಕೆ ನೀಡಿರುವುದು ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.
ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಚಿವರಿಗೆ ಎಚ್ಚರಿಕೆ ನೀಡಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸಚಿವರ ಮೇಲೆ ಮುಖ್ಯಮಂತ್ರಿಗೆ ನಂಬಿಕೆ ಇಲ್ಲವೇ ಎಂದು ಪ್ರಶ್ನಿಸಿದರು. ‘ಈ ಸಿಎಂಗೆ ಸ್ಟಿಂಗ್ ಆಪರೇಷನ್ ಮಾಡೋದೇ ಕೆಲಸನಾ?’ ಎಂದು ಕಿಡಿಕಾರಿದರು.
ಸಚಿವರನ್ನೇ ಸ್ಟಿಂಗ್ ಮಾಡಿ ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, ಈ ರೀತಿಯ ಚಟುವಟಿಕೆಗಳು ನಡೆಯುತ್ತಿದ್ದರೆ ಸರ್ಕಾರವೇ ಕ್ರಮ ಕೈಗೊಳ್ಳಲಿ ಎಂದು ಹೇಳಿದರು.
ಸಚಿವ ಕೆ.ಎನ್.ರಾಜಣ್ಣ ಪ್ರಕರಣವನ್ನು ಪ್ರಸ್ತಾಪಿಸಿದ ಅವರು, ಆ ಪ್ರಕರಣದಲ್ಲಿ ಏನಾಯಿತು, ಯಾರು ಮಾಡಿಸಿದರು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು. ಸದನದಲ್ಲಿ ಇನ್ನೂ 40 ಮಂದಿಯ ವಿಡಿಯೋಗಳಿವೆ ಎಂದು ಹೇಳಲಾಗಿತ್ತು ಎಂಬುದನ್ನೂ ಉಲ್ಲೇಖಿಸಿದರು.
ಪ್ರಮುಖ ನಾಯಕರ ವಿಡಿಯೋಗಳು ಈ ಹಿಂದೆ ಹರಿದಾಡುತ್ತಿದ್ದವು. ಇದೀಗ ಆ ವಿಚಾರ ನಿಂತಿದೆ. ಈ ಬಗ್ಗೆ ಮುಖ್ಯಮಂತ್ರಿಯನ್ನೇ ಕೇಳಬೇಕು ಎಂದು ಕುಮಾರಸ್ವಾಮಿ ಹೇಳಿದರು. ಸ್ಟಿಂಗ್ ಆಪರೇಷನ್ ಮತ್ತು ವಿಡಿಯೋಗಳಿಗೆ ಸಂಬಂಧಿಸಿದ ವಿಚಾರಗಳು ಇತ್ತೀಚಿನ ದಿನಗಳಲ್ಲಿ ರಾಜಕೀಯ ಚರ್ಚೆಯ ಭಾಗವಾಗಿವೆ ಎಂದು ಹೇಳಿದ ಕುಮಾರಸ್ವಾಮಿ, ತಮ್ಮ ಅವಧಿಯಲ್ಲಿ ಅಭಿವೃದ್ಧಿ ವಿಚಾರಗಳ ಹೊರತಾಗಿ ಇಂತಹ ವಿಷಯಗಳು ಚರ್ಚೆಯಾಗುತ್ತಿರಲಿಲ್ಲ ಎಂದು ಹೇಳಿದರು. ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾದ ಬಳಿಕದ ಅವಧಿಯಲ್ಲಿ ತಮ್ಮ ಹಳೆಯ ರಾಜಕೀಯ ವಿಧಾನಗಳನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯನ್ನೂ ಟೀಕಿಸಿದರು. ಕುಮಾರಸ್ವಾಮಿ ಮಾಡಿರುವ ಸ್ಟಿಂಗ್ ಆಪರೇಷನ್ ಕುರಿತ ಆರೋಪಗಳಿಗೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಅಥವಾ ಕಾಂಗ್ರೆಸ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




