Belagavi NewsBelgaum NewsKannada NewsKarnataka News

*ಕಲಾವಿದರ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವಾಗಬೇಕು: ಕೆ.ಎಚ್ ಚನ್ನೂರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಿರಿಯ ಕಲಾವಿದರ ಕಲಾ ಪ್ರತಿಭೆಯನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ‘ಸಾಂಸ್ಕೃತಿಕ ಸೌರಭ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕರಾದ ಕೆ.ಎಚ್.ಚನ್ನೂರ ಅವರು ಹೇಳಿದರು.

ಕುಮಾರ ಗಂಧರ್ವ ರಂಗಮಂದಿರದಲ್ಲಿ ಗುರುವಾರ (ಸೆ.17) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯ ಕಲಾವಿದರ ಪ್ರತಿಭೆಗೆ ತಕ್ಕ ಗೌರವ ಮತ್ತು ಫಲ ದೊರೆಯುವಂತೆ ಇಲಾಖೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿದೆ. ಕಲಾವಿದ ತನ್ನ ಕಲೆಯಲ್ಲಿ ಸಂಪೂರ್ಣವಾಗಿ ತಲ್ಲೀನನಾದಾಗ ತನ್ನ ಸುತ್ತಲಿನ ಪ್ರಪಂಚವನ್ನೇ ಮರೆತು ಕಲೆಯೊಂದಿಗೆ ಒಂದಾಗುತ್ತಾನೆ ಎಂದರು.

ಕಲೆ ಕೇವಲ ಮನರಂಜನೆಯ ಸಾಧನವಲ್ಲ ಅದು ನಮ್ಮ ನಾಡಿನ ಸಂಸ್ಕೃತಿ ಪರಂಪರೆ ಮತ್ತು ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮಹತ್ವದ ಮಾಧ್ಯಮವಾಗಿದೆ. ಹಿರಿಯ ಕಲಾವಿದರು ತಮ್ಮ ಬದುಕನ್ನು ಕಲೆಯ ಸೇವೆಗೆ ಮುಡಿಪಾಗಿಟ್ಟಿದ್ದಾರೆ ಮತ್ತು ಅವರ ಅನುಭವ, ಪ್ರತಿಭೆ ಹಾಗೂ ಸಾಧನೆಗಳನ್ನು ಗುರುತಿಸಿ ಗೌರವಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಇಂತಹ ಕಾರ್ಯಕ್ರಮಗಳು ಹಿರಿಯ ಕಲಾವಿದರಿಗೆ ಆತ್ಮ ಸೈರ್ಯ ನೀಡುವುದರ ಜೊತೆಗೆ ಯುವ ಪೀಳಿಗೆಗೆ ನಮ್ಮ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಅವರು ದೇಶಿಯ ಕಲೆ, ಸಂಸ್ಕೃತಿ ಹಾಗೂ ಜಾನಪದ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ. ವಿವಿಧ ದೇಶೀಯ ಕಲಾ ಪ್ರಕಾರಗಳನ್ನು ಪರಿಚಯಿಸುವ ಮೂಲಕ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹೆಚ್ಚಿನ ಅವಕಾಶ ಕಲ್ಪಿಸಬೇಕು. ವಿಶೇಷವಾಗಿ ಹಿರಿಯ ಕಲಾವಿದರಿಗೆ ಇಂತಹ ಕಾರ್ಯಕ್ರಮಗಳು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದ್ದು ಹಿರಿಯ ಕಲಾವಿದರ ಅನುಭವ ಹಾಗೂ ಕಲಾ ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯ ನಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷರಾದ ಯಲ್ಲಪ್ಪಾ ಹಿಮ್ಮಡಿ. ಹಿರಿಯ ಸಾಹಿತಿ ರಾಜಪ್ರಭು ಧೋತ್ರೆ, ಹಿರಿಯ ಕಲಾವಿದರಾದ ಭರತ್ ಕಲಾಚಂದ್ರ, ರೇಖಾ ಹೆಗಡೆ ಯಲ್ಲಪ್ಪ ನಾಯ್ಕರ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button