Belagavi NewsBelgaum NewsKannada NewsKarnataka NewsPolitics

*ಸಮಾಜದ ಏಳಿಗೆಗೆ ಒಗ್ಗಟ್ಟು ಅತ್ಯಗತ್ಯ: ಸಂಸದ ಜಗದೀಶ್ ಶೆಟ್ಟರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಮತ್ತು ಸ್ಪರ್ಧೆ ವೇಗವಾಗಿ ಬದಲಾಗುತ್ತಿದ್ದು ಅದಕ್ಕೆ ತಕ್ಕಂತೆ ವಿಶ್ವಕರ್ಮಿಗಳು ತಮ್ಮ ಕೌಶಲ್ಯವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿಕೊಳ್ಳಬೇಕಾಗಿದೆ ಎಂದು ಸಂಸದರಾದ ಜಗದೀಶ್ ಶೆಟ್ಟರ್ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ(ಸೆ.17) ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಜರುಗಿದ ಶ್ರೀ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Home add -Advt

ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ ಸಮಾಜದ ಒಗ್ಗಟ್ಟು ಅತ್ಯಂತ ಮುಖ್ಯ, ಸಮಾಜದ ಕಾರ್ಮಿಕರು ಮತ್ತು ಕುಶಲಕರ್ಮಿಗಳಿಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಅಗತ್ಯ ಸೌಲಭ್ಯಗಳು ಒದಗಿಸಿ ಅವರ ಕೌಶಲ್ಯವನ್ನು ಗುರುತಿಸಿ ಆರ್ಥಿಕವಾಗಿ ಹಾಗೂ ತಾಂತ್ರಿಕವಾಗಿ ಬೆಳೆಸುವ ಪ್ರಯತ್ನಗಳು ನಡೆಯಬೇಕು ಎಂದರು.

ವಿಶ್ವದ ವಿವಿಧೆಡೆ ಇರುವ ಪ್ರಸಿದ್ಧ ಹಾಗೂ ಪಾರಂಪರಿಕ ಕಟ್ಟಡಗಳು, ಕಲಾಕೃತಿಗಳು ಮತ್ತು ವಿವಿಧ ವಸ್ತುಗಳ ನಿರ್ಮಾಣದಲ್ಲಿ ವಿಶ್ವಕರ್ಮ ಸಮುದಾಯದ ಕರ್ಮಿಗಳ ಪರಿಶ್ರಮ ಮತ್ತು ಕೌಶಲ್ಯಗಳ ಮಹತ್ವದ ಪಾತ್ರವಿದೆ. ಹಲವು ತಲೆಮಾರುಗಳಿಂದ ತಮ್ಮ ಕಲೆ ಮತ್ತು ಕೌಶಲ್ಯವನ್ನು ಉಳಿಸಿಕೊಂಡು ಬಂದಿರುವ ಈ ಸಮುದಾಯದ ಕೊಡುಗೆ ಗಮನಾರ್ಹವಾಗಿದೆ.

ವಿಶ್ವಕರ್ಮ ಸಮುದಾಯವು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ದೇಶ-ವಿದೇಶಗಳ ಮಾರುಕಟ್ಟೆಯಲ್ಲಿ ಸ್ಪರ್ಧಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಸಮಾಜದ ವಿಶ್ವಕರ್ಮಿಗಳ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ. ವಿಶ್ವಕರ್ಮ ಸಮಾಜದ ಏಳಿಗೆಗೆ ಸರ್ಕಾರ, ಸಂಘ-ಸಂಸ್ಥೆಗಳು ಹಾಗೂ ಸಮಾಜದ ಎಲ್ಲ ವರ್ಗಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಸಂಸದರಾದ ಜಗದೀಶ್ ಶೆಟ್ಟರ್ ಹೇಳಿದರು.

ಮ.ನ.ರ. ಸಂಘ ಸಂಸ್ಥೆಯ ಪ್ರಾಚಾರ್ಯೆ ಹಾಗೂ ಸಾಹಿತಿಗಳಾದ ಡಾ. ನಿರ್ಮಲಾ ಬಟ್ಟಲ ಮಾತನಾಡಿ, ವಿಶ್ವಕರ್ಮ ಸಮುದಾಯವು ತನ್ನ ಕರಕುಶಲ ಕೌಶಲ್ಯದ ಮೂಲಕ ಸಮಾಜಕ್ಕೆ ಮಹತ್ವದ ಕೊಡುಗೆ ನೀಡುತ್ತಾ ಬಂದಿದೆ. ರೈತರಿಗೆ ಅಗತ್ಯವಾದ ಉಪಕರಣಗಳಿಂದ ಹಿಡಿದು ಸೈನಿಕರಿಗೆ ಬೇಕಾಗುವ ಶಸ್ತ್ರಾಸ್ತ್ರಗಳ ತಯಾರಿಕೆಯವರೆಗೆ ವಿವಿಧ ಕ್ಷೇತ್ರಗಳಲ್ಲಿ ಈ ಸಮುದಾಯದ ಪಾತ್ರ ಗಮನಾರ್ಹವಾಗಿದೆ ಎಂದರು.

ಪಂಚಲೋಹ ಸೇರಿದಂತೆ ವಿವಿಧ ಲೋಹಗಳಿಂದ ವೈವಿಧ್ಯಮಯ ವಸ್ತುಗಳನ್ನು ತಯಾರಿಸುವ ಪರಂಪರೆಯನ್ನು ವಿಶ್ವಕರ್ಮ ಸಮಾಜ ಹೊಂದಿದೆ. ಸರ್ಕಾರವು 2016ರಿಂದ ವಿಶ್ವಕರ್ಮ ಜಯಂತ್ಯೋತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ವಿಶ್ವಕರ್ಮ ಸಮುದಾಯದ ಸಾಂಪ್ರದಾಯಿಕ ಕರಕುಶಲ ಕಲೆ ಮತ್ತು ಕೌಶಲ್ಯವನ್ನು ಉಳಿಸಿ ಬೆಳೆಸುವ ಅಗತ್ಯವಿದೆ.

ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಕರಕುಶಲ ತರಬೇತಿ ಪಡೆಯಲು ಹಾಗೂ ತಮ್ಮ ಕೌಶಲ್ಯವನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಸರ್ಕಾರ ತರಬೇತಿ ಮತ್ತು ಪ್ರೋತ್ಸಾಹ ಧನದಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಡಾ. ನಿರ್ಮಲಾ ಬಟ್ಟಲ ಅವರು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಉಪ ಮಹಾಪೌರ ಹನುಮಂತ ಕೊಂಗಾಲಿ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಗೋಪಾಲ ಚಾರ್ಯ ಸ್ವಾಮಿಗಳು, ರವಿಕುಮಾರ, ರವಿ ಬಡಿಗೇರ್, ಸುಭಾಷ್ ಪಾಟೀಲ್, ಸಮಾಜ ಸೇವಕ ನಾಗಲಿಂಗ ಪತ್ತಾರ, ವಿಜಯ ಸುತಾರ, ರಂಜನಾ ಮುದಗೇಕರ, ದೇವಾನಂದ ಪತ್ತಾರ ಸೇರಿದಂತೆ ಸಮಾಜದ ಗಣ್ಯರು, ಮುಖಂಡರುಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಭವ್ಯ ಮೆರವಣಿಗೆ

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಅಶೋಕ ವೃತ್ತದಿಂದ ಪ್ರಾರಂಭವಾದ ಮೆರವಣಿಗೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸಮಾಜದ ಮುಖಂಡರು ಸೇರಿ ಶ್ರೀ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು. ವಿವಿಧ ಕಲಾ ವಾದ್ಯ ಮೇಳಗಳೊಂದಿಗೆ ಮೆರವಣಿಗೆಯು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದ ಮಾರ್ಗವಾಗಿ ಕುಮಾರ ಗಂಧರ್ವ ಕಲಾ ಮಂದಿರವನ್ನು ತಲುಪಿತು.

Related Articles

Back to top button