Belagavi NewsBelgaum NewsKannada NewsKarnataka News

*ನಿರ್ಮಲಾ ಪ್ರಕಾಶ ಅವರಿಗೆ ರಂಗಸೃಷ್ಟಿಯ ರಂಗಗೌರವ ಪ್ರದಾನ*

ಪ್ರಗತಿವಾಹಿನಿ ಸುದ್ದಿ: ವಿಶ್ವರಂಗಭೂಮಿ ದಿನಾಚರಣೆಯ ಹಿನ್ನೆಲೆಯಲ್ಲಿ ಹಿರಿಯ ರಂಗಕರ್ಮಿ ನಿರ್ಮಲಾ ಪ್ರಕಾಶ ಅವರಿಗೆ ಸೋಮವಾರ ರಂಗಸೃಷ್ಟಿಯ ಈ ವರ್ಷದ ರಂಗಗೌರವ ನೀಡಿ ಗೌರವಿಸಲಾಯಿತು.


ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಂಗ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿರ್ಮಲಾ ಪ್ರಕಾಶ, ಜೀವನದಲ್ಲಿ ಒಳ್ಳೆಯದನ್ನು ಕಲಿಯಲು ಸಿಕ್ಕ ಅವಕಾಶ ಕಳೆದುಕೊಳ್ಳಬಾರದು. ನನ್ನ ಜೀವನದಲ್ಲಿ ಅದನ್ನು ಸದಾ ಅಳವಡಿಸಿಕೊಂಡಿದ್ದೇನೆ ಎಂದರು.

ತಮ್ಮ ದೀರ್ಘ ರಂಗ ಅನುಭವವನ್ನು ಅವರು ಹಂಚಿಕೊಂಡರು.

ಮುಖ್ಯ ಅತಿಥಿಯಾಗಿ ಆಗಿ ಆಗಮಿಸಿದ್ದ ಹಿರಿಯ ಸಾಹಿತಿ ಎಲ್.ಎಸ್.ಶಾಸ್ತ್ರಿ, ಮನುಷ್ಯನನ್ನು ಸಂಸ್ಕಾರವಂತರನ್ನಾಗಿ ಮಾಡುವ ರಂಗಭೂಮಿ ಶ್ರೇಷ್ಠವಾದ ಕಲೆ. ರಂಗಭೂಮಿ ಬೇರೆ ಕಲಾ ಮಾಧ್ಯಮಗಳಂತೆ ಯಾವತ್ತೂ ಅಡ್ಡದಾರಿ ಹಿಡಿದಿಲ್ಲ ಎಂದರು.

ಪ್ರಶಸ್ತಿಗಳು ಅರಸಿಕೊಂಡು ಬರಬೇಕು. ಅದೇರೀತಿ ಅತ್ಯಂತ ಅರ್ಹರಿಗೆ ರಂಗಸೃಷ್ಟಿ ಈ ಬಾರಿ ಪ್ರಶಸ್ತಿ ನೀಡಿದೆ. ಯಾರೊಬ್ಬರಿಂದಲೂ ಇದಕ್ಕೆ ಅಪಸ್ವರ ಬರುವಂತಿಲ್ಲ. ಸ್ಥಳೀಯ ಪ್ರತಿಭೆ ಗುರುತಿಸಿ ಪ್ರಶಸ್ತಿ ನೀಡಿದ್ದು ಶ್ಲಾಘನೀಯ ಎಂದು ಶಾಸ್ತ್ರಿ ಹೇಳಿದರು.

ರಂಗಸೃಷ್ಟಿ ಅಧ್ಯಕ್ಷ ರಮೇಶ ಜಂಗಲ್ ಅಧ್ಯಕ್ಷತೆ ವಹಿಸಿದ್ದರು. ರಂಗಸೃಷ್ಟಿ ಉಪಾಧ್ಯಕ್ಷರಾದ ಎಂ.ಕೆ.ಹೆಗಡೆ ಮತ್ತು ಶೈಲಜಾ ಬಿಂಗೆ, ಕನ್ನಡ ಭವನ ವಿಶಸ್ಥ ಮಂಡಳಿ ಕಾರ್ಯದರ್ಶಿ ಆರ.ಬಿ.ಕಟ್ಟಿ ವೇದಿಕೆಯಲ್ಲಿದ್ದರು.

ಅಮೃತ ಕುಲಕರ್ಣಿ ಪ್ರಾರ್ಥನೆ ಹಾಡಿದರು. ಶರಣಯ್ಯ ಮಠಪತಿ ಸ್ವಾಗತಿಸಿದರು. ಡಾ.ರಾಮಕೃಷ್ಣ ಮರಾಠೆ ಪ್ರಾಸ್ತಾವಿಕ ಮಾತನಾಡಿದರು. ಶಿರೀಷ್ ಜೋಶಿ ಅಭಿನಂದನೆ ನುಡಿಗಳನ್ನಾಡಿದರು. ಶಾಂತಾ ಆಚಾರ್ಯ ವಿಶ್ವ ರಂಗಭೂಮಿ ಸಂದೇಶ ಪ್ರಸ್ತುತ ಪಡಿಸಿದರು. ಎಂ.ಕೆ.ಹೆಗಡೆ ಅಭಿನಂದನಾ ಪತ್ರ ವಾಚಿಸಿದರು. ಜ್ಯೋತಿ ಬದಾಮಿ ನಿರೂಪಿಸಿದರು. ಶರಣಗೌಡ ಪಾಟೀಲ, ಬಸವರಾಜ ಜಗಜಂಪಿ ಸೇರಿದಂತೆ ಹಲವರು ಇದ್ದರು. ಜಯಶ್ರೀ ಕ್ಷೀರಸಾಗರ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button