ಪ್ರಗತಿವಾಹಿನಿ ಸುದ್ದಿ; ಹಾವೇರಿ: ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬ್ಲಾಕ್ಮೇಲ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನ ಕೆಲವರನ್ನು ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿ.ಕೆ ಶಿವಕುಮಾರ್ ಅವರಿಗೆ ಈ ನೆಲದ ಕಾನೂನು ಗೊತ್ತಿದೆ ಎಂದು ಭಾವಿಸಿದ್ದೇನೆ. ಗಲಭೆಯಲ್ಲಿ ಯಾರು ಯಾರು ಇದ್ದಾರೆ. ಅವರನ್ನ ನೇರವಾಗಿ ಅರೆಸ್ಟ್ ಮಾಡೋದಿದೆ. ಕಾಂಗ್ರೆಸ್ ನ ಕೆಲ ಕಾರ್ಪೋರೇಟರ್ ಗಳಿಗೆ ನೊಟೀಸ್ ಕೊಟ್ಟರೆ ತಪ್ಪೇನೂ ಇಲ್ಲ. ನಾವು ಕಾನೂನಾತ್ಮಕವಾಗಿ ಕೊಟ್ಟಿದ್ದೇವೆ. ಅವರು ತಪ್ಪು ಮಾಡಿದ್ದರೆ ಹೆದರಬೇಕು. ಇಲ್ಲದಿದ್ರೆ ಉತ್ತರ ಕೊಡಬೇಕು. ನಾವು ಕಾನೂನು ಪಾಲನೆ ಮಾಡಿದ್ದೇವೆ. ಅವರೂ ಮಾಡಬೇಕಾಗುತ್ತೆ ಅಂತ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಯಾರನ್ನೂ ಬ್ಲಾಕ್ ಮೇಲ್ ಮಾಡೋ ಪ್ರಶ್ನೆ ಇಲ್ಲ. ಅಖಂಡ ಶ್ರೀನಿವಾಸಮೂರ್ತಿ ಒಬ್ಬ ಜವಬ್ದಾರಿಯುತ ಶಾಸಕರು. ಅವರು ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಯುತ್ತಿದೆ. ಶಾಸಕ ಶ್ರೀನಿವಾಸ ಮೂರ್ತಿ ಭದ್ರತೆ ಕೇಳಿದ್ದಾರೆ. ಅವರಿಗೆ ಭದ್ರತೆ ಕೊಟ್ಟಿದ್ದೇವೆ ಎಂದರು.
ಇನ್ನು ಶಾಸಕ ಜಮೀರ್ ಅಹಮ್ಮದ್ ಖಾನ್ ಪರಿಹಾರ ಘೋಷಣೆ ಮಾಡಿದ್ದು ನೋಡಿದರೆ ಅವರು ಯಾರ ಪರವಾಗಿ ಇದ್ದಾರೆ ಎಂಬುದು ಗೊತ್ತಾಗಬೇಕಾಗುತ್ತದೆ. ಮುಂದಿನ ವಾರದಲ್ಲಿ ಫೇಸ್ಬುಕ್, ವಾಟ್ಸಪ್, ಇನ್ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರನ್ನ ಕರೆದು ಸಭೆ ಮಾಡಲಾಗುವುದು ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ