Kannada NewsKarnataka NewsLatestPolitics

*ಎರಡೂ ವಿಪಕ್ಷಗಳು ಒಗ್ಗಟ್ಟಾಗಿ ಕೆಲಸ ಮಾಡಲು ನಿರ್ಧಾರ; ಹೆಚ್.ಡಿ.ಕುಮಾರಸ್ವಾಮಿ*

ನೈಸ್ ರಸ್ತೆ ಯೋಜನೆ ಸಂಪೂರ್ಣ ವಶಕ್ಕೆ ಪಡೆಯಲು ಜೆಡಿಎಸ್-ಬಿಜೆಪಿ ಆಗ್ರಹ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮರಸ್ವಾಮಿ ಹಾಗೂ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಬಿಜೆಪಿಯೂ ವಿರೋಧ ಪಕ್ಷ, ಜೆಡಿಎಸ್ ಕೂದ ವಿರೋಧ ಪಕ್ಷ ಹಾಗಾಗಿ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ ಎಂದರು.

ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಪಕ್ಷ ಸಂಘಟನೆಗೆ 10 ಜನರ ತಂಡ ರಚನೆ ಮಾಡಲಾಗಿದೆ. ಸರ್ಕಾರದ ಕಾನೂನು ಬಾಹಿರ ಚಟುವಟಿಕೆ ವಿರುದ್ಧ ರಾಜ್ಯಾದ್ಯಂತ ಧ್ವನಿ ಎತ್ತುತ್ತೇವೆ. ಈ ನಿಟ್ಟಿನಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರು ಸಂದೇಶ ನೀಡಿದ್ದಾರೆ. ದೇವೇಗೌದರ ಮಾರ್ಗದರ್ಶನ , ಪಕ್ಷ ಸಂಘತನೆ ಮೂಲಕ ಯುವಕರ ತಂಡ ರಚನೆ ಮಾಡಲಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ಅಕ್ರಮಗಳ ಆಗರವಾಗಿರುವ ಹಾಗೂ ರಾಜ್ಯದ ಜನತೆಗೆ ವಂಚನೆ ಎಸಗಿರುವ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ – ನೈಸ್ ಯೋಜನೆಯನ್ನು ಸಂಪೂರ್ಣವಾಗಿ ಸರಕಾರದ ವಶಕ್ಕೆ ಪಡೆಯಬೇಕು ಎಂದು ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ರಾಜ್ಯ ಸರಕಾರವನ್ನು ಒಟ್ಟಾಗಿ ಒತ್ತಾಯ ಮಾಡಿವೆ.

ನೈಸ್ ಯೋಜನೆಯನ್ನು ಯಾವ ಮುಲಾಜು ಇಲ್ಲದೆ ಸರಕಾರದ ವಶಕ್ಕೆ ಪಡೆಯಬೇಕು ಹಾಗೂ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಸರಾಜ್ ಬೊಮ್ಮಾಯಿ ಅವರು ಆಗ್ರಹಪಡಿಸಿದರು.

ನೈಸ್ ಅಕ್ರಮಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟು ಉಭಯ ನಾಯಕರು; ಜಂಟಿ ಸದನ ಸಮಿತಿ ವರದಿಯ ಪ್ರಕಾರ ಹಾಗೂ ನ್ಯಾಯಾಲಯಗಳು ನೀಡಿರುವ ಆದೇಶದಂತೆ ಆ ಇಡೀ ಯೋಜನೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಒಂದು ವೇಳೆ ಯೋಜನೆಯನ್ನು ವಶಕ್ಕೆ ಪಡೆಯದಿದ್ದರೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಸದನದ ಒಳಗೆ – ಹೊರಗೆ ಜಂಟಿ ಹೋರಾಟ ನಡೆಸಲಿವೆ ಎಂದು ಇಬ್ಬರೂ ನಾಯಕರು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ನೈಸ್ ಅಕ್ರಮ ರಾಜ್ಯದಲ್ಲಿ ಹಾಡುಹಗಲೇ ನಡೆದಿರುವ ಲೂಟಿ. ಜನರ ಭೂಮಿ ಹಾಗೂ ಹಣವನ್ನು ಕೊಳ್ಳೆ ಹೊಡೆಯಲಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರೆ, ಈ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ. ನೈಸ್ ವಿರುದ್ಧದ ನಮ್ಮ ಹೋರಾಟ ಹಲವಾರು ಮಜಲುಗಳನ್ನು ಮುಟ್ಟಲಿದೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button