
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಶೀಘ್ರದಲ್ಲೇ ಹುಕ್ಕಾ ಪಾರ್ಲರ್ ಗಳನ್ನು ಬಂದ್ ಮಾಡಲಾಗುವುದು ಮತ್ತು ಆಂಟಿಡ್ರಗ್ ಪಾಲಿಸಿ ಜಾರಿಗೆ ತರಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನ ಪರಿಷತ್ ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಮಹಾಂತೇಶ್ ಕವಟಗಿಮಠ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಮಾದಕ ವಸ್ತು ಸೇವನೆ ಸಂಪೂರ್ಣವಾಗಿ ನಿಷೇಧ ಆಗಬೇಕಾಗಿದೆ. ಸಮಾಜದಿಂದ ಇದನ್ನು ತೊಡೆದು ಹಾಕಬೇಕಿದೆ. ಸಿಂಥೆಟಿಕ್ ಡ್ರಗ್ ಅನ್ನು ವಿದ್ಯಾರ್ಥಿಗಳಿಗೆ ಕೊಡುವ ಕೆಲಸವಾಗುತ್ತಿದೆ, ಚಾಕೊಲೇಟ್, ಬಿಸ್ಲೆಟ್ ರೂಪದಲ್ಲೂ ಡ್ರಗ್ಸ್ ತರಲಾಗುತ್ತಿದೆ, ಇದನ್ನು ನಿಲ್ಲಿಸಲು ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆಯು ನಮ್ಮ ಇಲಾಖೆ ಜೊತೆ ಕೈ ಜೋಡಿಸಬೇಕಿದೆ, ಮಾಧ್ಯಮಗಳ ಸಹಕಾರವು ಅಗತ್ಯ ಎಂದರು.
ಶಾಲೆ ಆವರಣದಲ್ಲಿ ಇಂತಹ ಚಟುವಟಿಕೆ ನಡೆಯದಂತೆ ನೋಡಿಕೊಳ್ಳುವಂತೆ ಶಾಲೆಗಳಿಗೆ ಸೂಚನೆ ನೀಡಲಾಗಿದೆ, ಒಂದು ವೇಳೆ ಚಟುವಟಿಕೆ ನಡೆದರೆ ಸಂಬಂಧಪಟ್ಟ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಸ್ಲಂ ನಲ್ಲೂ ಮಾದಕ ವಸ್ತು ವ್ಯಾಪಾರ ನಡೆಯುತ್ತಿದೆ, ಉನ್ನತ ಮಟ್ಟದಲ್ಲಿಯೂ ಮಾದಕ ವಸ್ತು ವ್ಯಾಪಾರವಾಗಲಿದೆ. ಇದರ ತಡೆಗೆ ಮುಂದಾಗಿದ್ದೇವೆ ಎಂದರು.
ನೆರೆ ರಾಜ್ಯಗಳಿಂದ ಮಾದಕ ವಸ್ತು ಸರಬರಾಜಾಗುತ್ತಿದೆ ಹಾಗಾಗಿ ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ಇರಿಸಿದ್ದೇವೆ. ಬರುವ ದಿನದಲ್ಲಿ ಆಂಟಿಡ್ರಗ್ ಪಾಲಿಸಿ ತರಲಾಗುತ್ತದೆ, ಎನ್ಡಿಪಿಎಸ್ ರೂಲ್ಸ್ ನಲ್ಲಿ ಬದಲಾವಣೆ ತರಲು ಚಿಂತನ, ಕೇಂದ್ರದ ಜೊತೆ ಮಾತುಕತೆ ನಡೆಸಲಾಗುತ್ತದೆ ಎಂದರು.
ಹುಕ್ಕಾ ಪಾರ್ಲರ್ ಗೆ ಅನುಮತಿಯನ್ನು ಬಿಬಿಎಂಪಿ ಕೊಡಲಿದೆ. ಆದರೆ ಹುಕ್ಕಾ ಪಾರ್ಲರ್ ಬ್ಯಾನ್ ಮಾಡಲು ನಾವು ತೀರ್ಮಾನಿಸಿದ್ದೇವೆ. ಶೀಘ್ರದಲ್ಲೇ ಅದನ್ನು ಜಾರಿ ಮಾಡಲಿದ್ದೇವೆ. ಎಷ್ಟೇ ಪ್ರಭಾವಿಗಳು ಒತ್ತಡ ಹಾಕಿದರೂ ನಾವು ಮಣಿಯಲ್ಲ. ಹುಕ್ಕಾ ಪಾರ್ಲರ್ ಬ್ಯಾನ್ ಮಾಡುವುದಾಗಿ ಬಸವರಾಜ ಬೊಮ್ಮಾಯಿ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ