ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಲಾಕ್ ಡೌನ್ ಸಂದರ್ಭದಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಸೇರಿದಂತೆ ಆಹಾರದ ಅಗತ್ಯ ಇರುವವರಿಗೆ ಮಧ್ಯಾಹ್ನದ ಊಟ ವಿತರಿಸುವ ಇಸ್ಕಾನ್ ಸಂಸ್ಥೆಯ ಅಕ್ಷಯ ಪಾತ್ರೆ ಯೋಜನೆಗೆ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದರು.
ಬೆಂಗಳೂರಿನ ಕೆ.ಆರ್ ಮಾರುಕಟ್ಟೆಯ ಬಳಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಆಹಾರದ ಪೊಟ್ಟಣಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಲಾಕ್ ಡೌನ್ ಸಂದರ್ಭದಲ್ಲಿ ಯಾರೂ ಆಹಾರದ ಸಮಸ್ಯೆ ಎದುರಿಸಬಾರದು. ಈ ಹಿನ್ನೆಲೆಯಲ್ಲಿ ಕಳೆದ ಬಾರಿಯೂ ನಮ್ಮ ಜೊತೆಗೆ ದಾಸೋಹದ ಕೆಲಸದಲ್ಲಿ ಇಸ್ಕಾನ್ ಸಂಸ್ಥೆ ಕೈ ಜೋಡಿಸಿತ್ತು. ಈ ಬಾರಿಯೂ ಅವರ ಸಹಕಾರಕ್ಕೆ ನಾನು ಮನವಿ ಮಾಡಿದೆ. ಅದರ ಪ್ರತಿಫಲವಾಗಿ ಇಂದು ಪೊಲೀಸ್ ಸಿಬ್ಬಂದಿ ಸೇರಿದಂತೆ ಊಟದ ಅವಶ್ಯಕತೆಯಿರುವವರಿಗೆ ಇಸ್ಕಾನ್ ಸಂಸ್ಥೆ ಶುಚಿ ರುಚಿಯಾಗಿರುವ ಊಟವನ್ನು ಮಧ್ಯಾಹ್ನ ವಿತರಿಸುತ್ತಿದೆ. ಈ ಕಾರ್ಯಕ್ಕೆ ಚಾಲನೆ ನೀಡಲು ನನಗೆ ತುಂಬಾ ಸಂತೋಷ ಆಗುತ್ತಿದೆ. ಪ್ರತಿದಿನ ಮಧ್ಯಾಹ್ನ 1000 ಜನ ಪೊಲೀಸ್ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಿರುವ ಇಸ್ಕಾನ್ ಸಂಸ್ಥೆ ಕೆಲಸವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಲಾಕ್ ಡೌನ್ ವಿಸ್ತರಣೆ ವಿಷಯ ಕುರಿತಂತೆ ಇದುವರೆಗೆ ಅಧಿಕೃತವಾಗಿ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿಲ್ಲ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಲಿದ್ದಾರೆ. ಆ ಸಂದರ್ಭದಲ್ಲಿ ಪರಿಸ್ಥಿತಿ ಹಾಗೂ ಕೋವಿಡ್ ಅಂಕಿ ಅಂಶಗಳನ್ನು ಪರಿಶೀಲಿಸಲಿದ್ದಾರೆ. ಅದಾದ ಬಳಿಕ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿಗಳು ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಪರೀಕ್ಷೆ ಕಡಿಮೆ ಮಾಡಿಲ್ಲ:
ಕೋವಿಡ್ ಆರ್ಟಿ ಪಿಸಿಆರ್ ಪರೀಕ್ಷಾ ಪ್ರಮಾಣವನ್ನು ಕಡಿಮೆ ಮಾಡಿಲ್ಲ. ಈ ಹಿಂದೆ ಸಾರ್ವಜನಿಕ ಸ್ಥಳಗಳಾದ ರೈಲ್ವೆ ಸ್ಟೇಷನ್, ಬಸ್ ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶ ಗಳಲ್ಲಿ ಟೆಸ್ಟಿಂಗ್ ನಡೆಯುತ್ತಿತ್ತು. ಆದರೆ ಈಗ ನಾಕ್ಡೌನ್ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ನಡೆಯುತ್ತಿದ್ದ ಟೆಸ್ಟಿಂಗ್ ನಿಂತಿದೆ. ಹೀಗಾಗಿ ಟೆಸ್ಟಿಂಗ್ ಸಂಖ್ಯೆ ಕಡಿಮೆಯಾಗಿದೆ. ಆದರೆ ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರನ್ನು ನಾವು ಕಡ್ಡಾಯವಾಗಿ ಆರ್ಟಿಫಿಸಿಆರ್ ತಪಾಸಣೆಗೆ ಒಳಪಡಿಸುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.
ಉಪಚುನಾವಣೆ: 35ಕ್ಕೂ ಹೆಚ್ಚು ಶಿಕ್ಷಕರು ಬಲಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ