Kannada NewsKarnataka NewsLatestPolitics

*ಅಸಾಧ್ಯವನ್ನು ಸಾಧ್ಯ ಮಾಡಿದವರು ಪ್ರಧಾನಿ ನರೇಂದ್ರ ಮೋದಿಯವರು: ಬಸವರಾಜ ಬೊಮ್ಮಾಯಿ*

ದೇಶದ ಶೇ. 75 ರಷ್ಟು ಜನರು ಮೋದಿ ಬೆಂಬಲಿಸುತ್ತಿದ್ದಾರೆ: ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ: ಹತ್ತು ವರ್ಷ ಅಧಿಕಾರ ನಡೆಸಿದರೂ ದೇಶದಲ್ಲಿ ಪ್ರಧಾನಿ ಮೋದಿ ಪರ ಅಲೆ ಇದ್ದು, ದೇಶದ ಶೇ 75% ರಷ್ಟು ಜನರು ಮೋದಿಯವರನ್ನು ಬೆಂಬಲಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.


ಅವರು ಇಂದು ರೋಣ ತಾಲೂಕಿನ ಸವಡಿ, ಚಿಕ್ಕಮಣ್ಣೂರು, ಕುರಹಟ್ಟಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
ಈ ಚುನಾವಣೆ ರಾಜ್ಯಕ್ಕೆ ಸಂಬಂಧಿಸಿದ್ದಲ್ಲ. ಇಡೀ ದೇಶದ ಅಭಿವೃದ್ದಿ ಮತ್ತು ಭವಿಷ್ಯದ ಬಗ್ಗೆ ಚಿಂತಿಸುವ ಚುನಾವಣೆ. ಮೋದಿಯವರು ಪ್ರಧಾನಿಯಾಗಿ ಹತ್ತು ವರ್ಷ ಅಧಿಕಾರ ನಡೆಸಿದ್ದಾರೆ. ಆದರೂ, ಅವರ ಪರ ಅಲೆ ಇದೆ. ಈ ದೇಶದ ಶೇ 75% ರಷ್ಟು ಜನರು ನರೇಂದ್ರ ಮೋದಿಯವರ ಪರವಾಗಿದ್ದಾರೆ. ಶೇ 25% ರಷ್ಟು ಜನರು ಅವರನ್ನು ವಿರೋಧಿಸುತ್ತಿದ್ದಾರೆ ಎಂದರು.


ಮೋದಿಯವರು ತಮ್ಮ ತಾಯಿ ತೀರಿ ಹೋದಾಗ ಕೇವಲ ಎರಡು ತಾಸಿನಲ್ಲಿ ಅವರ ಅಂತ್ಯ ಸಂಸ್ಕಾರ ಮುಗಿಸಿ ಮತ್ತೆ ದೇಶದ ಕರ್ತವ್ಯಕ್ಕೆ ಹಾಜರಾದರು. ದೇಶದ ಸಫಾಯಿ ಕರ್ಮಚಾರಿಗಳ ಪಾದಪೂಜೆ ಮಾಡಿದರು. ಇಡೀ ದೇಶದ ಜನಸಂಖ್ಯೆಯನ್ನು ಆಸ್ತಿಯನ್ನಾಗಿ ಪರಿಗಣಿಸಿ ದೇಶದ ಅಭಿವೃದ್ದಿಗೆ ಜನಸಂಖ್ಯೆ ಕಾರಣ ಅಂತ ಜಗತ್ತಿಗೆ ತೊರಿಸಿ ಕೊಟ್ಟರು. ಬಡತನ ದೊಡ್ಡ ಸಮಸ್ಯೆ ಅಂತ ಎಲ್ಲರೂ ಹೇಳುತ್ತಿದ್ದರು. ಮೋದಿಯವರು 15 ಕೋಟಿ ಜನರನ್ನು ಬಡತನ ರೇಖೆಗಿಂತ ಮೇಲೆ ತಂದರು.ದೇಶದ ಎಲ್ಲ ಮನೆಗಳಿಗೂ ಮನೆ ಮನೆಗೆ ಗಂಗೆ ಅಂತ ನಲ್ಲಿ ನೀರು ಕೊಡುತ್ತಿದ್ದಾರೆ. ಯಾವುದು ಅಸಾಧ್ಯವೊ ಅದನ್ನು ಸಾಧ್ಯ ಮಾಡುವುದೇ ಮೋದಿಯವರ ಜಾಯಮಾನ. ಜನರು ಕಷ್ಟದಲ್ಲಿದ್ದಾಗ ಸರ್ಕಾರ ಹೇಗೆ ಸ್ಪಂದಿಸುತ್ತದೆ ಎನ್ನುವುದರ ಮೇಲೆ ಸರ್ಕಾರ ಜೀವಂತ ಇದಿಯೊ ಇಲ್ಲವೊ ಎನ್ನುವುದು ತಿಳಿಯುತ್ತದೆ. ನಮ್ಮ ಅವಧಿಯಲ್ಲಿ ಪ್ರವಾಹ ಬಂದಾಗ ನಾವು ತಿಂಗಳಲ್ಲಿ 17 ಲಕ್ಷ ಜನರಿಗೆ ಎರಡು ಪಟ್ಟು ಪರಿಹಾರ ನೀಡಿದ್ದೇವು. ಕೇಂದ್ರದ ಕಡೆಗೆ ನೋಡದೆ ನಾವು ಮೊದಲು ಪರಿಹಾರ ನೀಡಿದೆವು. ಈಗಿನ ಸರ್ಕಾರ ಪರಿಹಾರ ನೀಡದೇ ಜನರಿಗೆ ಮೊಸ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.


‌ಮೋದಿಯವರು ಹತ್ತು ವರ್ಷ ಅಧಿಕಾರ ಮಾಡಿದರು ಅವರ ಜನಪ್ರೀಯತೆ ಕಡಿಮೆಯಾಗಿಲ್ಲ. ಅದರೆ, ಕಾಂಗ್ರೆಸ್ ನವರಿಗೆ ಜನಪ್ರೀಯತೆ ಮುಖ್ಯವಲ್ಲ ಗಾಂಧಿ ಕುಟುಂಬದ ಕೃಪೆ ಇದ್ದರೆ ಮಾತ್ರ ಪ್ರಧಾನಿಯಾಗಲು ಸಾಧ್ಯ ಎಂದರು.


ಮೋದಿಯವರ ಅವಧಿಯಲ್ಲಿ ಭಯೋತ್ಪಾಕರಿಗೆ ತಕ್ಕ ಪಾಠ ಕಲಿಸಿದ್ದಾರೆ. ಮನಮೋಹನ್ ಸಿಂಗ್ ಅವರು ಪಾಕಿಸ್ತಾನ ಕ್ಕೆ ಪತ್ರ ಬರೆದು ನಿಮ್ಮ ಭಯೋತ್ಪಾದಕರು ನಮ್ಮ ಮೇಲೆ ದಾಳಿ ಮಾಡಿದ್ದಾರೆ. ಅವರಿಗೆ ಮಾಡಬೇಡಿ ಅಂತ ಹೇಳಲು ಕೇಳುತ್ತಿದ್ದರು. ಮೋದಿಯವರು ಅವರ ನೆಲಕ್ಕೆ ಹೋಗಿ ಅವರನ್ನು ದ್ವಂಸ ಮಾಡಿ ಬಂದರು.


ಮೋದಿಯವರು ಕೊವಿಡ್ ಸಂದರ್ಭದಲ್ಲಿ ದೇಶದ ಎಲ್ಲರಿಗೂ ಲಸಿಕೆ ಕೊಡಿಸಿದರು. ರಷ್ಯಾ ಉಕ್ರೇನ್ ಯುದ್ದದ ಸಂದರ್ಭದಲ್ಲಿ ಎರಡು ದಿನ ಯುದ್ದ ನಿಲ್ಲಿಸಿ ನಮ್ಮ ದೇಶದ 24 ಸಾವಿರ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದರು. ನಮ್ಮವರಷ್ಟೇ ಅಲ್ಲ ಪಾಕಿಸ್ತಾನದ ವಿದ್ಯಾರ್ಥಿಗಳು ಭಾರತದ ಧ್ವಜ ಹಿಡಿದು ಸುರಕ್ಷಿತವಾಗಿ ಬಂದರು.


ಕೊವಿಡ್ ಸಮಯದಲ್ಲಿ 10 ಕೆಜಿ ಅಕ್ಕಿ ಕೊಡುತ್ತಿದ್ದರು. ಈಗ ಐದು ಕೆಜಿ ಅಕ್ಕಿ ಉಚಿತವಾಗಿ ಕೊಡುತ್ತಿದ್ದಾರೆ. ರಾಜ್ಯ ಸರ್ಕಾರ ಗ್ಯಾರೆಂಟಿ ಕಾರ್ಡ್ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಅವರು ಕೊಡುತ್ತಿರುವ ಗೃಹಲಕ್ಷ್ಮೀ ಯೋಜನೆಗೆ ಮಹಿಳೆಯರು ಅಲೆದು ಅಲೆದು ಚಪ್ಪಲಿ ಸವೆದು ಹೋಗಿವೆ.


ಗ್ಯಾರೆಂಟಿ ಮೋಸ
ಕಾಂಗ್ರೆಸ್ 200 ಸ್ಥಾನಕ್ಕೆ ನಿಲ್ಲಿಸಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಾಗಿ ಹೇಳುತ್ತಾರೆ. 543 ಕ್ಷೇತ್ರದಲ್ಲಿ ಸ್ಪಷ್ಟ ಬಹುಮತ ಬರಲು 272 ಸ್ಥಾನ ಬೇಕು. ಇವರು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಆದರೂ ಮಹಿಳೆಯರಿಗೆ ಒಂದು ಲಕ್ಷ ರೂ ಕೊಡುವುದಾಗಿ ಹೇಳುತ್ತಾರೆ. ಅವರ ಸುಳ್ಳನ್ನು ಜನರಿಗೆ ತಿಳಿಸಿ ಹೇಳಬೇಕು ಎಂದರು.


ಕೊವಿಡ್ ಸಂದರ್ಭದಲ್ಲಿ ನಮಗೆ ಉಚಿತ ಲಸಿಕೆ ಕೊಡಿಸಿದ, ಉಚಿತ ಅಕ್ಕಿ ನೀಡಿದ, ಮನೆಗೆ ನಲ್ಲಿ ನೀರು ನೀಡಿದ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಲು ಈ ಬಾರಿ ಬಿಜೆಪಿಗೆ ಮತ ಹಾಕಿ . ಈ ಕ್ಷೇತ್ರದ ಅಭಿವೃದ್ದಿಗೆ ಅಗತ್ಯ ಯೋಜ‌ನೆಗಳನ್ನು ತರಲು ಎಲ್ಲ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಮಾಜಿ ಸಚಿವ ಕಳಕಪ್ಪ ಬಂಡಿ ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button