Latest

ಜನಸಂಪರ್ಕ ಬೆಳೆಸಿಕೊಳ್ಳಿ: ಸಿಇಓಗಳಿಗೆ ಮುಖ್ಯಮಂತ್ರಿ ಸಲಹೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು:  ಸಿಇಓಗಳು ಜನಸಂಪರ್ಕ ಹೊಂದಬೇಕು. ಹಳ್ಳಿಗರು ಸಮಸ್ಯೆಯ ಜೊತೆ ಜೀವನ ಮಾಡುತ್ತಾರೆ. ಸಮಸ್ಯೆಯ ಬಗ್ಗೆ ಚರ್ಚೆ ಮಾಡುವುದು ಬೇರೆ. ಸಮಸ್ಯೆಯ ಜೊತೆ ಬದುಕುವುದು ಬೇರೆ. ಅಧಿಕಾರಿಗಳು ತಳಮಟ್ಟಕ್ಕೆ ಹೋಗಿ ಸಮಸ್ಯೆಗಳ ಪರಿಹಾರದ ಬಗ್ಗೆ ಚಿಂತನೆ ಮಾಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಸಿ, ವಿವಿಧ ವಿಷಯಗಳ ಚರ್ಚೆ ನಡೆಸಿದ ನಂತರ ಮಾತನಾಡಿ, ಹಳ್ಳಿಗರು ಸಮಸ್ಯೆಯ ಜೊತೆ ಜೀವನ ಮಾಡುತ್ತಾರೆ. ಸಮಸ್ಯೆಯ ಬಗ್ಗೆ ಚರ್ಚೆ ಮಾಡುವುದು ಬೇರೆ. ಸಮಸ್ಯೆಯ ಜೊತೆ ಬದುಕುವುದು ಬೇರೆ. ಆದ್ದರಿಂದ ಅವರ ಸಮಸ್ಯೆ ಬಗೆಹರಿಸಲು ಶ್ರಮಿಸಬೇಕು ಎಂದು ತಿಳಿಸಿದರು.

ವಾರದಲ್ಲಿ ಮೂರು ದಿನ ಹಳ್ಳಿಗಳಿಗೆ ಭೇಟಿ ನೀಡಬೇಕು. ದಿಢೀರ್ ಭೇಟಿ ನೀಡಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸಿ. ಮಾನವೀಯತೆಯಿಂದ ಪರಿಹಾರದ ಚಿಂತನೆ ಮಾಡಿ, ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಇರಬೇಕು. ಗ್ರಾಮೀಣ ಜನರ ಬದುಕನ್ನುಹಸನು ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಜಿಲ್ಲೆಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಅಭಿನಂದನೀಯ. ಜಲಜೀವನ ಮಿಷನ್, ವಸತಿ, ಶಾಲೆಗಳ ದುರಸ್ತಿ ಸೇರಿದಂತೆ ಇಂದು ನಿಗದಿಪಡಿಸಿರುವ ಗುರಿಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು. ಎನ್ ಆರ್ ಇ ಜಿ ಯೋಜನೆಯಡಿ ಕ್ರಿಯಾತ್ಮಕವಾಗಿ ಕಾರ್ಯಕ್ರಮಗಳನ್ನು ರೂಪಿಸಿ. ಸರ್ಕಾರದ ಕಟ್ಟಡಗಳ ಆಸ್ತಿ ಸೃಜನೆಯ ಬಗ್ಗೆ ಗಮನ ನೀಡಬೇಕು ಎಂದು ತಿಳಿಸಿದರು.

ಸ್ತ್ರೀ ಶಕ್ತಿ ಮಾನವ ಸಂಪನ್ಮೂಲದ ದೊಡ್ಡ ಆಸ್ತಿ. ಎಸ್ ಸಿ ಎಸ್ ಟಿ, ಓಬಿಸಿ ಮಹಿಳೆಯನ್ನು ಆರ್ಥಿಕವಾಗಿ ಸಬಲರಾಗಿಸಬೇಕು. ಕರ್ನಾಟಕ ರಾಜ್ಯ ತಲಾವಾರು ಆದಾಯದಲ್ಲಿ 4 ನೇ ಸ್ಥಾನದಲ್ಲಿದೆ. ತಲಾವಾರು ಆದಾಯಕ್ಕೆ ಕೇವಲ 30 % ಜನ ಮಾತ್ರ ಕೊಡುಗೆ ನೀಡುತ್ತಿದ್ದಾರೆ. ಉಳಿದ ಶೇ.70 ರಷ್ಟು ಜನ ದಿನನಿತ್ಯದ ಬದುಕಿಗೆ ದುಡಿಯುವುದಾಗಿದೆ. ಈ ವರ್ಗದವರಿಗೆ ಆರ್ಥಿಕ ನೆರವು, ತರಬೇತಿ ನೀಡಿದರೆ ಅವರ ಜೀವನ ಮಟ್ಟ ಸುಧಾರಿಸುತ್ತದೆ. ಕೃಷಿಯಲ್ಲಿ ಶೇ.1 ರಷ್ಟು ಅಭಿವೃದ್ಧಿಯಾದರೆ, ಕೈಗಾರಿಕೆಗಳಲ್ಲಿ ಶೇ.4 ರಷ್ಟು ಹಾಗೂ ಸೇವಾ ಕ್ಷೇತ್ರದಲ್ಲಿ ಶೇ.10 ರಷ್ಟು ಅಭಿವೃದ್ಧಿಯಾಗುತ್ತದೆ ಎಂದರು.

ಸಿಇಓಗಳು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಕನಿಷ್ಟ ಶೇ.1 ರಷ್ಟಾದರೂ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿಪಡಿಸಿದರೆ, ಗ್ರಾಮೀಣ ಜನರ ಜೀವನದಲ್ಲಿ ಬದಲಾವಣೆ ತಂದಂತಾಗುತ್ತದೆ. ಜನರಿಗೆ ಇದರಿಂದ ವ್ಯವಸ್ಥೆಯ ಮೇಲೆ ವಿಶ್ವಾಸ ಮೂಡಿಸಲು ಸಾಧ್ಯ ಎಂದು ತಿಳಿಸಿದರು.

ಪ್ರಧಾನಿಯವರು ಮಧ್ಯವರ್ತಿಗಳ ಹಾವಳಿ ತಡೆಯಲು ಡಿಬಿಟಿ ವ್ಯವಸ್ಥೆ ಜಾರಿಗೆ ತಂದರು. ಅಂತೆಯೇ ರೈತರ ಸಂಕಷ್ಟವನ್ನು ಕಣ್ಣಾರೆ ಕಂಡು, ಅವರ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ರೈತ ವಿದ್ಯಾನಿಧಿ ಜಾರಿಗೆ ತರಲಾಗಿದೆ. ಹಿಂದೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಸೈಕಲ್ ನೀಡಿದ್ದರಿಂದ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಹೆಚ್ಚಿನ ಸುಧಾರಣೆ ಆಗಿತ್ತು.

ಆದ್ದರಿಂದ ಶಿಕ್ಷಣ, ಆರೋಗ್ಯ, ಉದ್ಯೋಗ ಸೃಜನೆಗೆ ಒತ್ತು ನೀಡಿ. ಶಿಶು ಮರಣ ಪ್ರಮಾಣ, ತಾಯಂದಿರ ಮರಣ ಪ್ರಮಾಣ ಹಾಗೂ ಅಪೌಷ್ಟಿಕತೆ ನಿವಾರಣೆಗೆ ಆದ್ಯತೆ ನೀಡಬೇಕು.

ಬಡವರು, ತಳವರ್ಗದ ಜನರ ಜೀವನ ಮಟ್ಟ ಸುಧಾರಣೆಗೆ ಶಿಕ್ಷಣ, ಉದ್ಯೋಗ, ಸಬಲೀಕರಣದ ಮಂತ್ರವನ್ನು ಅನುಷ್ಠಾನಗೊಳಿಸಬೇಕು. ಇದರಿಂದ ಅವರು ಸ್ವಾಭಿಮಾನದ ಬದುಕು ನಡೆಸಲು ಸಾಧ್ಯ ಎಂದು ತಿಳಿಸಿದರು.
ಅಂತೆಯೇ ಗ್ರಾಮ ಒನ್ ಯೋಜನೆಯಡಿ 30 ನಾಗರಿಕ ಸೇವೆಗಳನ್ನು ಪಂಚಾಯತ್ ಮಟ್ಟದಲ್ಲಿ ಒದಗಿಸಲಾಗುವುದು.
ಅಂತೆಯೇ ಜನಸ್ಪಂದನದಡಿ ದಾಖಲಾದ ದೂರುಗಳ ನಿವಾರಣೆಗೆ, ಸಮಸ್ಯೆ ಪರಿಹಾರಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ದಿನಕ್ಕೆ 10 ತಾಸು ಕೆಲಸ ಮಾಡಿ, 3 ದಿನ ಹಳ್ಳಿಗಳಲ್ಲಿ ಪ್ರವಾಸ ಕೈಗೊಳ್ಳಿ ಎಂದು ಸಲಹೆ ನೀಡಿದರು. ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಗಮನ ಕೇಂದ್ರೀಕರಿಸಿ. ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ನೆರವು ಪಡೆದುಕೊಂಡು ಕಾರ್ಯನಿರ್ವಹಿಸಿ, ಜನರ ಸಮಸ್ಯೆ ಬಗೆಹರಿಸಿ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯ ಮುಖ್ಯಾಂಶಗಳು

ಜಲಜೀವ್ ಮಿಷನ್
1. ಎಲ್ಲ ಜಿಲ್ಲೆಗಳ ಅಧಿಕಾರಿಗಳಿಂದ ಜಲಜೀವನ್ ಯೋಜನೆಯ ಪ್ರಸಕ್ತ ಸಾಲಿನಲ್ಲಿ ಆಗಿರುವ ಪ್ರಗತಿ,ಮುಂದಿನ 3 ತಿಂಗಳಲ್ಲಿ ಮಾಡುವ ಗುರಿಸಾಧನೆ ಹಾಗೂ ಬ್ಯಾಚ್ -2 ಕಾಮಗಾರಿಗಳ ಪ್ರಗತಿಯ ಮಾಹಿತಿಯನ್ನು ಪಡೆಯಲಾಯಿತು.
2. ಕೆಲವು ವಿಶೇಷ ಪ್ರಕರಣಗಳನ್ನು ಹೊರತು ಪಡಿಸಿ, ಎಲ್ಲ ಜಿಲ್ಲೆಗಳಲ್ಲಿ ಜಲಜೀವನ್ ಮಿಷನ್ ಯೋಜನೆಯ ಗುರಿ ಸಾಧನೆ ಮಾಡುವಂತೆ ಸೂಚಿಸಿದರು.
3. ಗ್ರಾಮೀಣಾಭಿವೃದ್ಧಿ ಸಚಿವರು ಹಾಗೂ ಅಪರ ಮುಖ್ಯ ಕಾರ್ಯದರ್ಶಿಗಳು ರಾಜ್ಯಾದ್ಯಂತ ಪ್ರವಾಸ ಮಾಡಿ ಯೋಜನೆಯ ಪ್ರಗತಿ, ಕಾಮಗಾರಿ ಗುಣಮಟ್ಟ ಪರಿಶೀಲನೆ ಮಾಡಬೇಕು.
4. ಈ ಯೋಜನೆಯ ಯಶಸ್ಸು, ವೈಫಲ್ಯ ಎರಡಕ್ಕೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೇ ಹೊಣೆ. ಯಶಸ್ವಿಯಾದವರಿಗೆ ಮನ್ನಣೆ ನೀಡಲಾಗುವುದು, ವಿಫಲರಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕಟ್ಟುನಿಟ್ಟಿನ ಸೂಚಿಸಲಾಯಿತು.
5. ಬರಪೀಡಿತ ಜಿಲ್ಲೆಗಳಾದ ಯಾದಗಿರಿ. ಕಲ್ಬುರ್ಗಿ, ರಾಯಚೂರು ಜಿಲ್ಲೆಗಳಲ್ಲಿ ಪ್ರಾಶಸ್ತ್ಯದ ಮೇಲೆ ಕಾಮಗಾರಿ ಪೂರ್ಣಗೊಳ್ಳಬೇಕು. ತುಮಕೂರು ಜಿಲ್ಲೆಯಲ್ಲಿ ವಿವಿಧ ಮೂಲಗಳಿಂದ ನೀರು ಪಡೆದು ಜಲ ಜೀವನ್ ಮಿಷನ್ ಯೋಜನೆಯನ್ನು ಜಾರಿಗೊಳಿಸಲು ಸಮಗ್ರ ಯೋಜನೆ ರೂಪಿಸುವಂತೆ ಸೂಚಿಸಿದರು.
6. ಚಾಮರಾಜನಗರ ಜಿಲ್ಲೆಯ ಗಡಿಯಲ್ಲಿ ಎತ್ತರದಲ್ಲಿರುವ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ವಿಶೇಷ ಯೋಜನೆ ರೂಪಿಸುವಂತೆ ನಿರ್ದೇಶನ ನೀಡಲಾಯಿತು.
7. ಬಹುಗ್ರಾಮ ಯೋಜನೆಗಳನ್ನು ಪ್ರತ್ಯೇಕವಾಗಿ ಪ್ರಗತಿ ಪರಿಶೀಲನೆ ನಡೆಸಬೇಕು. ಜಲಜೀವನ್ ಮಿಷನ್ ನೊಂದಿಗೆ ಇವುಗಳನ್ನು ಹೇಗೆ ಸಂಯೋಜನೆಗೊಳಿಸಬಹುದು ಎಂದು ಪರಿಶೀಲಿಸಿ, ಪ್ರತಿ ಮನೆಗೆ ನೀರು ಒದಗಿಸಲು ಆದ್ಯತೆ ನೀಡುವಂತೆ ತಿಳಿಸಲಾಗಿದೆ.
8. ಗುತ್ತಿಗೆದಾರರಿಗೆ ನೀಡಲಾಗುವ ಕಾಮಗಾರಿಗಳ ಸಂಖ್ಯೆಯನ್ನು ನಿಗದಿಪಡಿಸುವಂತೆ ಗ್ರಾಮೀಣಾಭಿವೃದ್ಧೀ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಯಿತು. ಒಬ್ಬ ಗುತ್ತಿಗೆದಾರನಿಗೆ ಹೆಚ್ಚಿನ ಕಾಮಗಾರಿಗಳನ್ನು ನೀಡುವುದರಿಂದ ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸಲು ಸಾಧ್ಯವಿಲ್ಲ. ಸರ್ಕಾರದ ಇಚ್ಛೆಯಂತೆ ಯೋಜನೆಗಳು ಕಾರ್ಯಗತವಾಗಬೇಕು ಎಂದು ತಿಳಿಸಿದರು.
9. ನಳ ಸಂಪರ್ಕ ನೀಡುವಾಗ ಉತ್ತಮ ಗುಣಮಟ್ಟದ ಮೀಟರ್ ಅಳವಡಿಸಬೇಕು. ಅಧಿಕಾರಿಗಳು ಕಾಮಗಾರಿಗಳ ಖುದ್ದು ಪರಿಶೀಲನೆ ಮಾಡಬೇಕು.
10. ಕಾಮಗಾರಿಗಳ ಬಾಹ್ಯ ಸಂಸ್ಥೆಗಳ ಪರಿಶೀಲನೆ (ಥರ್ಡ್ ಪಾರ್ಟಿ ಇನ್ಸ್ಪೆಕ್ಷನ್) ಸಮರ್ಪಕವಾಗಿ ಆಗುತ್ತಿರುವ ಬಗ್ಗೆ ಗಮನ ಹರಿಸಬೇಕು. ಬಾಹ್ಯ ಸಂಸ್ಥೆಗಳ ತಪಾಸಣೆಯ ನಂತರ ಪುನ: ಪರಿಶೀಲನೆಗಾಗಿ ಸ್ಕ್ವಾಡ್ ನ್ನು ನೇಮಿಸಬೇಕು.
11. ಕಾಮಗಾರಿ ಪ್ರಗತಿಯ ಬಗ್ಗೆ ಸಿಇಓಗಳು ಪ್ರತಿ ತಿಂಗಳು ಮುಖ್ಯಮಂತ್ರಿಗಳಿಗೆ ಹಾಗೂ ಸಂಬಂಧಪಟ್ಟ ಸಚಿವರಿಗೆ ವರದಿ ನೀಡಬೇಕು.
12. ಅಧಿಕಾರ ವಿಕೇಂದ್ರೀಕರಣದ ಉದ್ದೇಶದಿಂದ ಎಕ್ಸಿಕ್ಯುಟಿವ್ ಇಂಜಿನಿಯರ್ ಗೆ 1 ಕೋಟಿ ಮೊತ್ತದ ಕಾಮಗಾರಿ, ಅಧೀಕ್ಷಕ ಇಂಜಿನಿಯರ್ ರವರಿಗೆ 2.5 ಕೋಟಿ ಮೊತ್ತದ ಕಾಮಗಾರಿಗಳನ್ನು ಪರಿಶೀಲನೆ ಮಾಡುವ ಅಧಿಕಾರ ನೀಡಬೇಕು ಎಂದು ಸೂಚಿಸಲಾಯಿತು.
ಉದ್ಯೋಗ ಖಾತರಿ ಹಾಗೂ ಜೆಜೆಎಂ ಆಡಿಟ್
13. ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಆಡಿಟ್ ಹಾಗೂ ಜಲಜೀವನ್ ಮಿಷನ್ ಯೋಜನೆಯಡಿ ನೀರಿನ ಆಡಿಟ್ (ಹಂಚಿಕೆ ಮತ್ತು ಬಳಕೆಗೆ ಸಂಬಂಧಿಸಿದಂತೆ) ಆಗಬೇಕು ಎಂದು ಸೂಚಿಸಲಾಗಿದೆ.
14. ರಾಜ್ಯದಲ್ಲಿ ಅಪೌಷ್ಟಿಕತೆಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಜಂಟಿಯಾಗಿ ವಿವಿಧ ಆಯಾಮಗಳಿಂದ ಅಪೌಷ್ಟಿಕ ಮಕ್ಕಳ ಸಮೀಕ್ಷೆಯನ್ನು ನಡೆಸಬೇಕು. ಹಾಗೂ ಅಪೌಷ್ಟಿಕತೆ ನಿವಾರಣೆಗೆ ಸಮಗ್ರ ಯೋಜನೆ ರೂಪಿಸಬೇಕು ಎಂದು ಸೂಚಿಸಿದರು.
15. ಅಪೌಷ್ಟಿಕತೆ ನಿವಾರಣೆಗೆ ಕಾರ್ಯಕ್ರಮಗಳಿಗೆ ಇರುವ ಮಾನದಂಡಗಳನ್ನು ಪುನರ್ರಚನೆಯಾಗಬೇಕು. ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು.
ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳ ನಿರ್ಮಾಣ:
16. ಕುಡಿಯುವ ನೀರಿನ ಯೋಜನೆಯ ನಂತರ ವಸತಿ ಯೋಜನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಪ್ರಧಾನಮಂತ್ರಿ ಆವಾಸ್ ಯೋಜನೆ ಆದ್ಯತೆ ಮೇರೆಗೆ ಅನುಷ್ಠಾನಗೊಳಿಸಬೇಕು.
17. ಅಮೃತ ವಸತಿ ಯೋಜನೆಯಡಿ 750 ಗ್ರಾಮಪಂಚಾಯ್ತಿಗಳಲ್ಲಿ ಫಲಾನುಭವಿಗಳ ಆಯ್ಕೆಯನ್ನು ಶೀಘ್ರವಾಗಿ ಪೂರ್ಣಗೊಳ್ಳಬೇಕು.
18. ಅತ್ಯಂತ ಕಡಿಮೆ ಪ್ರಗತಿ ಇರುವ ಜಿಲ್ಲೆಗಳಲ್ಲಿ ಮಾರ್ಚ್ ಅಂತ್ಯದೊಳಗೆ 75 % ಹಾಗೂ ಜೂನ್ ಒಳಗೆ 100% ಪ್ರಗತಿ ಆಗಬೇಕು.
19. ಈ ಸರ್ಕಾರದ ಅವಧಿಯಲ್ಲಿ ಘೋಷಣೆಯಾಗಿರುವ 4 ಲಕ್ಷ ಮನೆಗಳು ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಲೇಬೇಕು. ಈ ಸರ್ಕಾರದ ಅವಧಿಯಲ್ಲಿಯೇ ಫಲಾನುಭವಿಗಳಿಗೆ ಮನೆಗಳು ದೊರಕುವಂತಾಗಬೇಕು.
ಎಸ್ ಸಿ ಎಸ್ ಟಿ , ಒಬಿಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ :
20. ವಿದ್ಯಾರ್ಥಿ ವೇತನ ತಲುಪಿಸಲು ಆಧಾರ್ ಕಾರ್ಡ್ ಜೋಡಣೆ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಬೇಕು. ವಿದ್ಯಾರ್ಥಿ ವೇತನ ಡಿಬಿಟಿ ಮೂಲಕ ತಲುಪಿಸಲು ಆಧಾರ್ ಕಾರ್ಡ್ ಬ್ಯಾಂಕುಗಳಿಗೆ ಲಿಂಕ್ ಮಾಡಿಸುವ ಕಾರ್ಯವೂ ತ್ವರಿತವಾಗಿ ಆಗಬೇಕು.
21. ಬಡವರಿಗಾಗಿ ರೂಪಿಸಲಾಗಿರುವ ಯೋಜನೆಗಳು ನಿಗದಿತ ಅವಧಿಯಲ್ಲಿ ನಿಗದಿತ ಪರಿಹಾರ ತಲುಪಿದಾಗ ಮಾತ್ರ ಸರ್ಕಾರದ ಯೋಜನೆಗಳು ಫಲಪ್ರದವಾಗುತ್ತವೆ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು.
ಕೋವಿಡ್ ಲಸಿಕೆ ಕಾರ್ಯಕ್ರಮ
22. ರಾಜ್ಯದಲ್ಲಿ ಜನವರಿ 14 ರೊಳಗೆ ಶೇ. 100 ರಷ್ಟು ಮೊದಲ ಡೋಸ್ ಲಸಿಕೆ ನೀಡಬೇಕು.
23. ರಾಜ್ಯದ ಸರಾಸರಿಗಿಂತ ಕಡಿಮೆ ಪ್ರಗತಿ ಆಗಿರುವ ಜಿಲ್ಲೆಗಳಲ್ಲಿ ಆದ್ಯತೆಯ ಮೇರೆಗೆ ಲಸಿಕೆ ಅಭಿಯಾನವನ್ನು ತೀವ್ರಗೊಳಿಸಬೇಕು.
24. ಹಿಂದೇಟು ಹಾಕುತ್ತಿರುವ ಕೆಲವು ಸಮುದಾಯಗಳನ್ನು ಸಿಇಓಗಳೂ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ಮಾಡಿ ಮನವೊಲಿಸುವಂತೆ ನಿರ್ದೇಶನ ನೀಡಿದರು.
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ
25. ರಾಜ್ಯದಲ್ಲಿ ಬಡ ರೋಗಿಗಳಿಗೆ ನಗದು ರಹಿತ ಚಿಕಿತ್ಸೆ ಸೌಲಭ್ಯ ನೀಡಲು ಅನುವಾಗುವಂತೆ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡುಗಳ ವಿತರಣೆಯಲ್ಲಿ ಪ್ರಗತಿ ಕಡಿಮೆ ಇದ್ದು, ಈ ಕಾರ್ಡುಗಳನ್ನು ವಿತರಿಸಲು ಅಭಿಯಾನ ಹಮ್ಮಿಕೊಳ್ಳುವಂತೆ ಸೂಚಿಸಿದರು.
26. ಕೋವಿಡ್ ಸಂಭಾವ್ಯ 3ನೇ ಅಲೆಗೆ ಅಗತ್ಯ ಸಿದ್ಧತೆಗಳನ್ನು ನಡೆಸುವಂತೆ ಸೂಚಿಸಲಾಗಿದೆ. ಮಾರ್ಗಸೂಚಿಗಳನ್ನು ಗಂಭೀರವಾಗಿ ಪಾಲನೆ ಮಾಡಬೇಕು. ಆಕ್ಸಿಜನ್ ಲಭ್ಯತೆ, ಆಕ್ಸಿಜನೇಟೆಡ್ ಬೆಡ್ ಗಳು, ಐಸಿಯು ಬೆಡ್ ಗಳು ಹಾಗೂ ಔಷಧಿಗಳ ಲಭ್ಯತೆಗೆ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲಾಯಿತು.

ಶಿಕ್ಷಣ :
27. ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ಶಾಲಾ ಕೊಠಡಿಗಳ ದುರಸ್ತಿ ಹಾಗೂ ಸಂಪೂರ್ಣ ನಾಶವಾಗಿರುವ ಶಾಲಾಕೊಠಡಿಗಳ ನಿರ್ಮಾಣದ ಪ್ರಗತಿಯ ಬಗ್ಗೆ ಮಾಹಿತಿ ಪಡೆದರು.
28. ಎನ್ ಡಿ ಆರ್ ಎಫ್ ಮಾರ್ಗಸೂಚಿಯಂತೆ ಅನುದಾನ ಬಿಡುಗಡೆ ಮಾಡಲಾಗಿದೆ.
29. ಜನವರಿ ಅಂತ್ಯದೊಳಗೆ ಹಾನಿಗೊಳಗಾದ ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ಪೂರ್ಣಗೊಳ್ಳಬೇಕೆಂದು ಸೂಚಿಸಿದರು.
30. ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅಂದಾಜು ಸಿದ್ಧಪಡಿಸಿ ಪ್ರಸ್ತಾವನೆಯನ್ನು ಶೀಘ್ರವಾಗಿ ಸಲ್ಲಿಸಬೇಕು.
31. ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ವೇಳೆಗೆ ಹೊಸ ಶಾಲಾ ಕೊಠಡಿಗಳ ನಿರ್ಮಾಣವೂ ಪೂರ್ಣಗೊಳ್ಳಬೇಕು.
32. ಹತ್ತು ಸಾವಿರ ಶಿಕ್ಷಕರ ನೇಮಕಾತಿಗೆ ಆರ್ಥಿಕ ಇಲಾಖೆಯಿಂದ ಅನುಮತಿ ನೀಡಲಾಗಿದೆ. ಜಿಲ್ಲೆಗಳಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು.
33. ಕಲ್ಯಾಣ ಕರ್ನಾಟಕದ ಭಾಗಕ್ಕೆ 16000 ಹುದ್ದೆಗಳನ್ನು ಮಂಜೂರು ಮಾಡಿದ್ದು, ಇದರಲ್ಲಿ 5000 ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಸೂಚಿಸಿದರು.

ಕಲ್ಲೋಳಿ, ನಾಗನೂರ, ಅರಭಾವಿ ಪಟ್ಟಣ ಪಂಚಾಯತ್ ಬಾಲಚಂದ್ರ ಜಾರಕಿಹೊಳಿ ಬೆಂಬಲಿಗರ ವಶಕ್ಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button