*ಕಾಂಗ್ರೆಸ್ ನವರು ತೆರಿಗೆ ವಂಚನೆ ಮಾಡಿದರೆ ಪ್ರಶ್ನಿಸಬಾರದೇ ; ಬಸವರಾಜ ಬೊಮ್ಮಾಯಿ*
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಎರಡೂ ಪಕ್ಷಗಳು ಒಂದಾಗಿರುವುದರಿಂದ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಗದಗನಲ್ಲಿ ಇಂದು ಜೆಡಿಎಸ್ ಜಿಲ್ಲಾ ಕಚೇರಿಗೆ ಭೇಟಿ ನೀಡಿ ಜೆಡಿಎಸ್ ಮುಖಂಡರ ಜೊತೆ ಸಭೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಸ್ ಹಾಗೂ ಬಿಜೆಪಿ ನಡುವೆ ರಾಜ್ಯಮಟ್ಟದಲ್ಲಿ ಮೈತ್ರಿ ಆಗಿರುವುದರಿಂದ ರಾಜ್ಯದಲ್ಲಿ ಹೊಸ ರಾಜಕೀಯ ಗಾಳಿ ಬೀಸುತ್ತಿದೆ. ಮೊನ್ನೆ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಎಲ್ಲ ಜಿಲ್ಲೆ ಹಾಗೂ ಕ್ಷೇತ್ರದಲ್ಲಿ ಜೆಡಿಎಸ್ ಬಿಜೆಪಿ ಸಮನ್ವಯ ಮುಂದುವರೆಸಿಕೊಂಡು ಹೋಗಬೇಕು ಎಂದು ತೀರ್ಮಾನ ಮಾಡಲಾಗಿದೆ ಅದರಂತೆ ಕ್ಷೇತ್ರದಲ್ಲಿ ಸಮನ್ವಯ ಸಭೆ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಅತ್ಯಂತ ಹೆಚ್ಚು ಸ್ಥಾನ ಗೆಲ್ಲಲು ದೇವೇಗೌಡರು ಹಾಗೂ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತೇವೆ. ಎರಡೂ ಪಕ್ಷಗಳು ಒಂದಾಗಿರುವುದರಿಂದ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಷಾಗಿದೆ ಎಂದು ಹೇಳಿದರು.
ಇದೇ ವೇಳೆ ಮಂಡ್ಯದಲ್ಲಿ ಮೈತ್ರಿಯಲ್ಲಿ ಗೊಂದಲದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಗೊಂದಲ ಇಲ್ಲ. ಎರಡೂ ಪಕ್ಷಗಳ ಮುಖಂಡರು ಮಾತುಕತೆ ನಡೆಸುತ್ತಿದ್ದಾರೆ. ಸುಮಲತಾ ಅವರೊಂದಿಗೆ ನಮ್ಮವರು ಮಾತುಕತೆ ನಡೆಸಿದ್ದಾರೆ. ನಮ್ಮ ರಾಜ್ಯಾಧ್ಯಕ್ಷರು ಮಾತನಾಡಿದ್ದಾರೆ. ಅವರ ಮನವೊಲಕೆ ಆಗುತ್ತಿದೆ. ಯಾವುದೇ ಗೊಂದಲ ಇಲ್ಲ. ಚಿತ್ರದುರ್ಗದಲ್ಲಿ ಸಮಸ್ಯೆ ಬಗೆ ಹರಿಯುವ ವಿಶ್ವಾಸ ಇದೆ. ಬಿಜೆಪಿಯಲ್ಲಿ ಯಾವುದೇ ಗೊಂದಲ ಇಲ್ಲ. ಗದಗ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಅವರೂ ಪಕ್ಷದ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಹೇಳಿದರು.
ಬ್ಲಾಕ್ ಮನಿ ಇಟ್ಟುಕೊಂಡರೆ ಪ್ರಶ್ನಿಸಬಾರದೇ?
ಕಾಂಗ್ರೆಸ್ ಯಾವಾಗಲೂ ಬ್ಲಾಕ್ ಮನಿ ಮೇಲೆ ರಾಜಕಾರಣ ಮಾಡುತ್ತದೆ. ಸುಮಾರು 600 ಕೋಟಿ ರೂ.ತೆರಿಗೆ ವಂಚನೆ ಮಾಡಿದೆ. ಅದನ್ನು ಪ್ರಶ್ನೆ ಮಾಡಬಾರದೇ, ಅದಕ್ಕೂ ಚುನಾವಣೆಗೂ ಸಂಬಂಧವಿಲ್ಲ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರು ದೇವೇಗೌಡರಿಗೆ ಜೆಡಿಎಸ್ ಪಕ್ಷ ಎಲ್ಲಿದೆ ಎಂದು ಪ್ರಶ್ನಿಸಿದ್ದರು. ಆ ಹಿನ್ನೆಲೆಯಲ್ಲಿ ದೇವೇಗೌಡರು ಅವರ ಗರ್ವಭಂಗವಾಗಬೇಕಿ ಅಂತ ಹೇಳಿಕೆ ಕೊಟ್ಟಿದ್ದಾರೆ. ನಾವು ಕಾಂಗ್ರೆಸ್ ವಿರುದ್ದ ಮೈತ್ರಿ ಮಾಡಿಕೊಂಡಿದ್ದೇವೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಾಯಕರು, ಹೀಗಾಗಿ ಅವರ ವಿರುದ್ದ ನಮ್ಮ ಹೋರಾಟ ಇದ್ದೇ ಇರುತ್ತದೆ ಎಂದರು.
ಇದೇ ವೇಳೆ ದಾವಣಗೆರೆ ಬಿಜೆಪಿ ಮಹಿಳಾ ಅಭ್ಯರ್ಥಿ ಕುರಿತು ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಯಾವುದೇ ಪಕ್ಷದ ಅಭ್ಯರ್ಥಿ ಇರಲಿ ಮಹಿಳೆಯರ ಬಗ್ಗೆ ಮಾತನಾಡುವುದು ಸರಿಯಲ್ಲ. ಮಹಿಳೆಯರಿಗೆ ಅವಮಾನ ಮಾಡಿದಂತಾಗುತ್ತದೆ. ಅದಕ್ಕೆ ಸಹಜವಾಗಿ ವಿರೋಧ ವ್ಯಕ್ತವಾಗುತ್ತದೆ ಎಂದು ಹೇಳಿದರು.
ಇನ್ನು ಜೆಡಿಎಸ್ ಶಾಲ್ ಹಾಕಿಕೊಂಡಿರುವುದಕ್ಕೆ ಏನು ಅನಿಸುತ್ತಿದೆ ಎಂದು ಕೇಳಿದ ಪ್ರಶ್ನೆಗೆ ಜವಾಬ್ದಾರಿ ಡಬಲ್ ಆಗಿದೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ