*ಶ್ರೀಕೃಷ್ಣದೇವರಾಯರ ಸಮಾಧಿ ಈಗ ಮಾಂಸ ಸ್ವಚ್ಛಗೊಳಿಸುವ ತಾಣ: ಐತಿಹಾಸಿಕ ಪವಿತ್ರ ಸ್ಥಳಕ್ಕೆ ಇದೆಂತಹ ದುಸ್ಥಿತಿ: ಪುರಾತತ್ವ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ಯತ್ನಾಳ್ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ಆಡಳಿತಗಾರ, ದೇಶ ಕಂಡ ಮಹಾನ್ ಅರಸ ಶ್ರೀಕೃಷ್ಣದೇವರಾಯರ ಸಮಾಧಿ ಈಗ ಮಾಂಸ ಸ್ವಚ್ಛಗೊಳಿಸುವ ಸ್ಥಳವಾಗಿ ಬದಲಾಗಿರುವುದು ನಿಜಕ್ಕೂ ಖಂಡನೀಯ. ಸ್ಥಳೀಯ ದುಷ್ಕರ್ಮಿಗಳು ಶ್ರೀಷ್ಣದೇವರಾಯರ ಸಮಾಧಿ ಒಂದು ಕಂಬಕ್ಕೆ ಕುರಿ ಕಟ್ಟಿ ಹಾಕಿರುವ, ಸಮಾಧಿ ಮೇಲೆ ಮಾಂಸ ಸ್ವಚ್ಛಗೊಳಿಸಿರುವ ದೃಶ್ಯ ವೈರಲ್ ಆಗಿದ್ದು, ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬಿಜೆಪಿ ಶಾಸಕ ಯತ್ನಾಳ್ ಈ ಬಗ್ಗೆ ಕಿಡಿಕಾರಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯ ತುಂಗಭದ್ರಾ ನದಿಯ ದಡದಲ್ಲಿ ೬೪ ಕಂಬಗಳನ್ನು ಒಳಗೊಂಡಿರುವ ಶ್ರೀಕೃಷ್ಣದೇವರಾಯರ ಸಮಾಧಿ ಮಂಟಪದ ಒಂದು ಕಂಬಕ್ಕೆ ದುಷ್ಕರ್ಮಿಗಳು ಮೇಕೆ ಕಟ್ಟಿಹಾಕಿ, ಸಮಾಧಿ ಮೇಲೆ ಮಾಂಸ ಸ್ವಚ್ಛಗೊಳಿಸಿದ್ದಾರೆ.
ಈ ಕೃತ್ಯದ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತೀಯ ಇತಿಹಾಸದಲ್ಲಿ ಶ್ರೇಷ್ಠ ಆಡಳಿತಗಾರರಾಗಿದ್ದ ವಿಜಯನಗರದ ಶ್ರೀ ಕೃಷ್ಣದೇವರಾಯರ ಸಮಾಧಿಯ ದುಸ್ಥಿತಿ ಇದು. ಈ ಜಾಗವನ್ನು ಅಕ್ಷರಶಃ ಮಾಂಸದ ಮಾರುಕಟ್ಟೆಯಾಗಿ ಕೆಲ ಸ್ಥಳೀಯರು ಪರಿವರ್ತಿಸಿರುವುದು ಕನ್ನಡ ನಾಡಿನ ಹೆಮ್ಮೆಯ ಅರಸರಾದ ಅಸಾಮಾನ್ಯ ಆಡಳಿತಗಾರ, ಅಪ್ರತಿಮ ದಂಡನಾಯಕ ಶ್ರೀ ಕೃಷ್ಣದೇವರಾಯರಿಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂ ದೇವಾಲಯಗಳನ್ನು ಕೆಡವಿ, ದೇಶದ ಸಂಪತ್ತನ್ನು ದೋಚಿ, ಸಾವಿರಾರು ಹಿಂದೂಗಳನ್ನು ಅಮಾನವೀಯಗಿ ಕೊಂದ ಔರಂಗಜೇಬನ ಸಮಾಧಿಗೆ ಪುರಾತತ್ವ ಸರ್ವೇಕ್ಷಣಾ ಇಲಾಖೆ [ASI] ತೆರಿಗೆದಾರರ ಹಣದಿಂದ ಸಂರಕ್ಷಣೆ ಮಾಡುತ್ತಿದೆ; ಆದರೆ, ವಿಜಯನಗರ ಸಾಮ್ರಾಜ್ಯವನ್ನು ವಿಸ್ತರಿಸಿದ ಪರಾಕ್ರಮಿ; ಕಲೆ,ಸಾಹಿತ್ಯ ರಂಗಗಳ ಪೋಷಕ ಶ್ರೀ ಕೃಷ್ಣದೇವರಾಯರ ಸಮಾಧಿಗೆ ಏಕೆ ಈ ರೀತಿಯಾದ ದಿವ್ಯ ನಿರ್ಲಕ್ಷ್ಯ ?
ಇದು ಕನ್ನಡಿಗರಿಗಷ್ಟೇ ಅಲ್ಲ ರಾಷ್ಟ್ರಕ್ಕೆ ಮಾಡಿದ ಅವಮಾನ, ಮಾಂಸವನ್ನು ಮಾರುತ್ತ ಸ್ಥಳದ ಪಾವಿತ್ರ್ಯತೆಯನ್ನು ಹಾಳು ಮಾಡುತ್ತಿರುವ ಇಂತವರನ್ನು ಜಿಲ್ಲಾಡಳಿತ ಕೂಡಲೇ ಜಾಗ ಖಾಲಿ ಮಾಡಲು ಸೂಚಿಸಬೇಕು ಹಾಗೂ ಇಲ್ಲಿ ನೈರ್ಮಲ್ಯ ಮತ್ತು ಸಮಾಧಿಯ ಪಾವಿತ್ರ್ಯತೆಯನ್ನು ಕಾಪಾಡುವ ಕೆಲಸವನ್ನು ಸರ್ಕಾರ ತುರ್ತಾಗಿ ಮಾಡಲಿ ಎಂದು ಆಗ್ರಹಿಸಿದ್ದಾರೆ.