ಪ್ರಗತಿವಾಹಿನಿ ಸುದ್ದಿ, ಬೆಳಗಾವಿ– : ಹಿರಿಯ ಪತ್ರಕರ್ತ,ಕವಿ ಹಾಗೂ ಲೇಖಕ ಡಾ.ಸರಜೂ ಕಾಟ್ಕರ್ ಅವರನ್ನು ಬಸವರಾಜ ಕಟ್ಟೀಮನಿ ಪತ್ರಕರ್ತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸೆಪ್ಟೆಂಬರ ೧೯ ರಂದು ಜರುಗಿದ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸಭೆಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ.
ಡಾ. ಸರಜೂ ಕಾಟ್ಕರ್ ಅವರು ವಿವಿಧ ಪತ್ರಿಕೆಗಳಲ್ಲಿ ಸುದೀರ್ಘ ಕಾಲ ವರದಿಗಾರರಾಗಿ, ಮುಖ್ಯ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.
’ಸಾಕ್ಷಿ’ ಹೇಳಲಾಗದ ಕಥೆಗಳು, ’ವೃತ್ತಾಂತ’ ಇವು ಅವರ ಪತ್ರಿಕಾ ಬದುಕಿನ ಅನುಭವ ಆಧರಿಸಿದ ಕೃತಿಗಳು. ಕಾವ್ಯ, ಕಥೆ, ಕಾದಂಬರಿ, ಅನುವಾದ ನಾಟಕ ವಿಮರ್ಶೆ ಕುರಿತು ೬೦ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ.
ಈಗಾಗಲೇ ಇವರು ಕರ್ನಾಟಕ ಮಾಧ್ಯಮ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗೌರವ ಪ್ರಶಸ್ತಿ, ಬೆಳಗಾವಿಯ ರಾಜಾಧ್ಯಕ್ಷ ಪ್ರಶಸ್ತಿ, ಮುಂಬಯಿಯ ಕರ್ನಾಟಕ ಮಲ್ಲ ಪ್ರಶಸ್ತಿ, ಗೋವೆಯ ಲೋಕ ಶಿಕ್ಷಣ ರಾಷ್ಟ್ರೀಯ ಪ್ರತಿಷ್ಠಾನದ ನಾರಾಯಣ ಅಠವಲೆ ಪತ್ರಿಕಾ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
೪೫ ವರ್ಷಗಳ ಸುದೀರ್ಘ ಸೇವೆ ಮತ್ತು ಸಾಧನೆಗಳನ್ನು ಪರಿಗಣಿಸಿ ಪತ್ರಕರ್ತ ಪ್ರಶಸ್ತಿಗೆ ಡಾ. ಸರಜೂ ಕಾಟ್ಕರ್ ಅವರನ್ನು ಸಭೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ