ಪ್ರಗತಿವಾಹಿನಿ ಸುದ್ದಿ; ಬೆಳಗಾವಿ : ಬಸವರಾಜ ಕಟ್ಟಿಮನಿಯವರು ತಮ್ಮ ಸಾಹಿತ್ಯದ ಮೂಲಕ ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದರು. ಕಟ್ಟಿಮನಿಯವರ ಸಾಹಿತ್ಯ ಸಮಾಜಕ್ಕೆ ಆದರ್ಶಪ್ರಾಯ, ದಾರಿದೀಪವಾಗಿದೆ ಕಟ್ಟಿಮನಿಯವರ ಸಾಹಿತ್ಯ ಇಂದಿಗೂ ಸಮಾಜದ ಓರೆಕೊರೆ ತಿದ್ದುವಲ್ಲಿ ಸಕ್ರೀಯವಾಗಿದೆ ಎಂದು ಕೆ.ಎಲ್.ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ನುಡಿದರು.
ಅವರು ನಗರದ ಲಿಂಗರಾಜ ಮಹಾವಿದ್ಯಾಲಯದಲ್ಲಿ ನಡೆದ ಕರ್ನಾಟಕ ಸರ್ಕಾರದ, ಬಸವರಾಜ ಕಟ್ಟಿಮನಿ ಪ್ರತಿಷ್ಠಾನ ಹಾಗೂ ಕೆ.ಎಲ್.ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ಬಸವರಾಜ ಕಟ್ಟಿಮನಿಯವರ ಮೂರು ಕೃತಿಗಳ ಲೋಕಾರ್ಪಣೆ – ಗೌರವ ಸನ್ಮಾನ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪುಸ್ತಕಗಳನ್ನು ಲೋಕರ್ಪಣೆಗೊಳಿಸಿ ಮಾತನಾಡಿದ ಹಿರಿಯ ಸಾಹಿತಿ ಪ್ರೊ.ಸಿದ್ಧಲಿಂಗ ಪಟ್ಟಣಶೆಟ್ಟಿ ಕಟ್ಟಿಮನಿ, ಬಸವರಾಜ್ ಕಟ್ಟಿಮನಿ ಬಡವರ ಬದುಕು, ಕಷ್ಟ, ಅಸಹಾಯಕತೆ ತಿಳಿದು ಸಾಹಿತ್ಯ ರಚಿಸಿದವರು. ತಮ್ಮ ಜನಪರ ಸಾಹಿತ್ಯದ ಮೂಲಕ ಕಾಲದ ನಿಧಿಯಲ್ಲಿ ಅಜರಾಮರಾಗಿರುವ ಸಾಹಿತಗಳಾಗಿದ್ದಾರೆ ಎಂದು ತಿಳಿಸಿದರು.
ಬಸವರಾಜ ಕಟ್ಟಿಮನಿಯವರು ರಚಿಸಿದ ಕಟ್ಟಿಮನಿ ಬದುಕು – ಬರಹ ಕೃತಿ ಕುರಿತು ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಬಸವರಾಜ ಸಾದರ, ಸಾಹಿತಿ ಉಳಿಯುವುದು ಆತನ ಕೃತಿಯ ಮೂಲಕ ಕಟ್ಟಿಮನಿಯವರು ನೇರ ನುಡಿಯ ಸಾಹಿತಿ, ಪತ್ರಕರ್ತರಾಗಿದ್ದರು. ಅವರು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆಯನ್ನು ಸಲ್ಲಿಸಿದ್ದಾರೆ. ಅವರ ಸಾಹಿತ್ಯವನ್ನು ವಿಶ್ವವಿದ್ಯಾಲಯಗಳು ಪಠ್ಯಕ್ರಮದಲ್ಲಿ ಅಳವಡಿಕೊಳ್ಳಬೇಕೆಂದು ತಿಳಿಸಿದರು.
‘ಬಸವರಾಜ ಕಟ್ಟಿಮನಿಯವರು ರಚಿಸಿದ ಬಸವರಾಜ ಕಟ್ಟಿಮನಿ ಕಥೆಗಳು ಒಂದು ಅವಲೋಕನ ಕೃತಿ’ ಕುರತು ಮಾತನಾಡಿದ ಹಿರಿಯ ಲೇಖಕ ಚಂದ್ರಶೇಖರ ಅಕ್ಕಿ ಬಸವರಾಜ ಕಟ್ಟಿಮನಿಯವರು ಮಹಿಳಾ ಸಂವೇದನೆ ಕುರಿತು ಸಾಹಿತ್ಯ ರಚಿಸಿದವರು. ಕಟ್ಟಿಮನಿಯವರು ಸಾಹಿತ್ಯ ಜನಮೆಚ್ಚಿ ಓದುವ ಸಾಹಿತ್ಯ ಹಾಗೂ ಜನರು ಕಟ್ಟಿಮನಿಯವರ ಕುರಿತು ಬರೆಯವಂತಹ ಸಾಹಿತಿಗಳು ಎಂದು ಅಭಿಪ್ರಾಯಪಟ್ಟರು.
ಬಸವರಾಜ ಕಟ್ಟಿಮನಿಯವರು ರಚಿಸಿದ ಪ್ರಗತಿಶಿಲ ಕಾದಂಬರಿಗಳು ಕೃತಿಯ ಕುರಿತು ಮಾತನಾಡಿದ ಖ್ಯಾತ ಕಥೆ – ಕಾದಂಬರಿಕಾರ ಡಾ.ಬಾಳಾಸಾಹೇಬ ಲೋಕಾಪುರ ಕಟ್ಟಿಮನಿಯವರು ಮಾನವತೆ ಧ್ವಜವನ್ನು ಎತ್ತಿಹಿಡಿದ ಸಾಹಿತಗಳು ಅವರ ಸಾಹಿತ್ಯ ಮಾನವೀಯತೆಯನ್ನು ಬೆಂಬಲಿಸುವ ಸಾಹಿತ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಸವರಾಜ ಕಟ್ಟಿಮನಿಯವರ “ಜ್ವಾಲಾಮುಖಿಯ ಮೇಲೆ” ಕಾದಂಬರಿಯ ಹಿಂದಿ ಅನುವಾದಕ್ಕಾಗಿ ಪ್ರತಿಷ್ಠತ ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಪಡೆದ ಹಿರಿಯ ಸಾಹಿತಿ ಪ್ರೊ.ಧರಣೇಂದ್ರ ಕುರಕುರಿಯವರನ್ನು ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಅವರು ಕಟ್ಟಿಮನಿಯವರು ತಾವು ಬದುಕಿದಂತೆ ಸಾಹಿತ್ಯ ರಚಿಸಿದವರು. ಅವರ ಸಾಹಿತ್ಯವನ್ನು ಸಮಾಜಕ್ಕೆ ಹಾಗೂ ಯುವ ಜನಾಂಗಕ್ಕೆ ತಲುಪಿಸುವ ಕಾರ್ಯವನ್ನು ಕಟ್ಟಿಮನಿ ಪ್ರತಿಷ್ಠಾನ ಮಾಡುತ್ತಿದೆ. ಆ ನಿಟ್ಟಿನಲ್ಲಿ ಕಟ್ಟಿಮನಿ ಪ್ರತಿಷ್ಠಾನ ಇದುವರೆಗೂ ಅವರ ೨೮ ಕೃತಿಗಳನ್ನು ಪ್ರಕಟಿಸಿದೆ ಎಂದು ಹೇಳಿದರು.
ಲಿಂಗರಾಜ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಕುಮಾರಿ.ಸ್ವಾತಿ ಕುರುಬರ, ಕುಮಾರಿ.ಸಂಜನಾ ಯಂಬತ್ನಾಳ ಹಾಗೂ ಕುಮಾರ ಬಾಳೇಶ ಶಿರಣ್ಣವರ ಕಟ್ಟಿಮನಿಯವರ ಕಥೆಗಳ ವಿಮರ್ಶೆ ಹಾಗೂ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಸರಜೂ ಕಾಟ್ಕರ್, ಶಿರೀಷ ಜೋಷಿ, ದುರ್ಗಾದಾಸ್, ರಾಮಕೃಷ್ಣ ಮರಾಠೆ ಪ್ರೇಮಾ ನಡುವಿನಮನಿ ಪ್ರಾಚಾರ್ಯ ಹನಮಂತ ಮೇಲಿನಮನಿ ಉಪಸ್ಥಿತರಿದ್ದರು.
ವಿಜಯಲಕ್ಷ್ಮೀ ಅಕ್ಕನ್ನವರ ಪ್ರಾರ್ಥಿಸಿದರು, ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ವಿದ್ಯಾವತಿ ಭಜಂತ್ರಿ ಸ್ವಾಗತಿಸಿದರು. ಡಾ.ಎಚ್.ಎಮ್.ಚನ್ನಪ್ಪಗೋಳ ವಂದಿಸಿದರು. ಡಾ.ರೇಣುಕಾ ಕಠಾರಿ ಹಾಗೂ ಸಿದ್ದನಗೌಡ ಪಾಟೀಲ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ