
ಪ್ರಗತಿವಾಹಿನಿ ಸುದ್ದಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 2019-20 ರಿಂದ 2022-23 ರವರೆಗೆ ನಡೆದಿರುವ ಕಾಮಗಾರಿಗಳ ಅನುಷ್ಠಾನದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತಾದ ತನಿಖಾ ವರದಿಯನ್ನು ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ ದಾಸ್ ನೇತೃತ್ವದ ತನಿಖಾ ಆಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ. ಈ ತನಿಖಾ ವರದಿಯು ಅನುಬಂಧಗಳೊಂದಿಗೆ ಒಟ್ಟು 8900 ಪುಟಗಳನ್ನು ಹೊಂದಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 2019-20 ರಿಂದ 2022-23 ರವರೆಗೆ ನಡೆದಿರುವ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಂಪೂರ್ಣವಾದ ತನಿಖೆ ನಡೆಸಲು ಉಪ ಮುಖ್ಯಮಂತ್ರಿಗಳು ದಿನಾಂಕ:13.07.2023 ರಂದು ಟಿಪ್ಪಣಿ ಮೂಲಕ ಮುಖ್ಯಮಂತ್ರಿಗಳಿಗೆ ಕೋರಿದರು.
- ದಿನಾಂಕ:05.08.2023 ರ ಸರ್ಕಾರದ ಆದೇಶದಲ್ಲಿ ತಜ್ಞರಗಳನ್ನೊಳಗೊಂಡ ನಾಲ್ಕು ವಿಶೇಷ ತನಿಖಾ ಸಮಿತಿಗಳನ್ನು ರಚಿಸಿ ಪರಿಪೂರ್ಣ ತನಿಖಾ ವರದಿಯನ್ನು ಸಲ್ಲಿಸಲು ಸೂಚಿಸಿದೆ.
- ದಿನಾಂಕ:15.12.2023 ರ ಸರ್ಕಾರದ ಆದೇಶದಲ್ಲಿ ನಾಲ್ಕು ವಿಶೇಷ ತನಿಖಾ ಸಮಿತಿಗಳನ್ನು ಹಿಂಪಡೆದು ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ ದಾಸ್ ವಿಚಾರಣಾ ಆಯೋಗಕ್ಕೆ ತನಿಖೆಯನ್ನು ವರ್ಗಾಯಿಸಿದೆ.
- ದಿನಾಂಕ:20.04.2024ರ ಸರ್ಕಾರದ ಅಧಿಸೂಚನೆಯಲ್ಲಿ ಈ ತನಿಖೆಯನ್ನು ವಿಚಾರಣಾ ಆಯೋಗದ ಮತ್ತು ವಿಶೇಷ ತನಿಖಾ ಸಮಿತಿಗಳ ಪರಿಶೀಲನಾ ಅಂಶಗಳನ್ನು ಸಹ ಒಳಗೊಂಡAತೆ ವಿಚಾರಣಾ ಆಯೋಗವು ತನಿಖೆಯನ್ನು ಮುಂದುವರೆಸುವುದು ಎಂದು ಸ್ಪಷ್ಟೀಕರಣ ನೀಡಿದೆ.
- ಈ ಹಿನ್ನೆಲೆಯಲ್ಲಿ, ಆಯೋಗವು ತನಿಖೆ ನಡೆಸಲು ಕೆಳಕಂಡ ಪರಿಶೀಲನಾ ಮಾರ್ಗವನ್ನು ಅನುಸರಿಸಿದೆ:
- ಕಾಮಗಾರಿಗಳ ಕಡತ ಪರಿಶೀಲನೆ
- ಕಾಮಗಾರಿಗಳ ಸ್ಥಳ ಪರಿಶೀಲನೆ
- ಕಾಮಗಾರಿಗಳ ಲೆಕ್ಕ ಪರಿಶೀಲನೆ
- ರ‍್ಯಾಂಡಮ್ ಆಯ್ಕೆ ಮೂಲಕ ಆಯ್ಕೆಯಾದ 528 ಮತ್ತು ಇತರೆ 233, ಒಟ್ಟು 761 ಪೂರ್ಣಗೊಂಡ ಕಾಮಗಾರಿಗಳ ತನಿಖೆ ನಡೆಸಿ ಹಲವು ನ್ಯೂನತೆಗಳನ್ನು ಪತ್ತೆ ಮಾಡಲಾಗಿದೆ.
- ಅಂತಿಮವಾಗಿ ವಿಚಾರಣಾ ಆಯೋಗವು ದಿನಾಂಕ: 30.08.2025 ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 2019-20 ರಿಂದ 2022-23 ರವರೆಗೆ ನಡೆದಿರುವ ಕಾಮಗಾರಿಗಳ ಅನುಷ್ಠಾನದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತಾದ ತನಿಖಾ ವರದಿಯನ್ನು ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಇವರಿಗೆ ಸಲ್ಲಿಸಿದೆ. ಈ ತನಿಖಾ ವರದಿಯು ಅನುಬಂಧಗಳೊಂದಿಗೆ ಒಟ್ಟು 8900 ಪುಟಗಳನ್ನು ಹೊಂದಿದೆ.
- ತನಿಖಾ ವರದಿಯಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನಿನಂತೆ ಕ್ರಮಕೈಗೊಳ್ಳಲು ಶಿಫಾರಸು ಮಾಡಿದೆ. ಜೊತೆಗೆ ಸುಧಾರಣಾ ಕ್ರಮಕೈಗೊಳ್ಳಲು ಸಹ ಶಿಫಾರಸು ಮಾಡಿದೆ.