ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬೆಳಗಾವಿಯಿಂದ ಹೆಚ್ ಎ ಎಲ್ ವಿಮಾನ ನಿಲ್ಸಾಣ ಹಾಗೂ ಅಲ್ಲಿಂದ ನೇರವಾಗಿ ವಿಕ್ಡೋರಿಯಾ ಆಸ್ಪತ್ರೆಗೆ ಭೇಟಿ ನೀಡಿ, ಬಿಬಿಎಂಪಿ ಕಚೇರಿಯ ಅಗ್ನಿ ಅನಾಹುತದಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ಕ್ಷೇಮ ವಿಚಾರಿಸಿದರು.
ಎಲ್ಲರನ್ನೂ ಟ್ರಾಮಾ ಸೆಂಟರ್ ಗೆ ಶಿಫ್ಟ್ ಮಾಡಿ ಉತ್ತಮ ಚಿಕಿತ್ಸೆ ನೀಡಲು ಸೂಚಿಸಿದರು. ಘಟನೆ ಬಗ್ಗೆ ಪ್ರತ್ಯೇಕ ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಮತ್ತು ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದರು.
ಅಗ್ನಿ ಅನಾಹುತ ನಡೆದ ಬಿಬಿಎಂಪಿ ಕೇಂದ್ರ ಕಚೇರಿ ಗುಣಮಟ್ಟ ಪ್ರಯೋಗಾಲಯಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಶುಕ್ರವಾರ ರಾತ್ರಿ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಡಿ.ಕೆ.ಶಿವಕುಮಾರ ಅವರು ಪೊಲೀಸರು ಹಾಗೂ ಅಧಿಕಾರಿಗಳಿಂದ ಘಟನೆ ಕುರಿತು ಹೆಚ್ಚಿನ ಮಾಹಿತಿ ಪಡೆದರು.
*ಬಿಬಿಎಂಪಿ ಕಚೇರಿ ಬಳಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ:*
ಅಗ್ನಿ ಅನಾಹುತ ನಡೆದ ಗುಣಮಟ್ಟ ಪರಿಶೀಲನೆ ಪ್ರಯೋಗಾಲಯ ಇರುವ ಜಾಗವೇ ಇದಲ್ಲ. ಮುಖ್ಯಮಂತ್ರಿಗಳು ಕೂಡ ಅದನ್ನೇ ಗಮನಿಸಿದ್ದಾರೆ. ಇಂತಹ ಪ್ರಯೋಗಾಲಯ ಸುರಕ್ಷಿತ ಜಾಗದಲ್ಲಿ ಇಡಬೇಕು. ಹೀಗಾಗಿ ಇದನ್ನು ಸ್ಥಳಾಂತರ ಮಾಡಲಾಗುವುದು.
ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈ ಅವಘಡದ ಕುರಿತು ಬಿಬಿಎಂಪಿ ಅಧಿಕಾರಿಗಳು, ಪೊಲೀಸರು ಸೇರಿದಂತೆ ಮೂರು ತಂಡಗಳು ಪ್ರತ್ಯೇಕ ತನಿಖೆ ಮಾಡಲಿವೆ.
ಈ ಅವಘಡದಲ್ಲಿ ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವಂತೆ ಆಸ್ಪತ್ರೆ ಸಿಬ್ಬಂದಿಗೆ ಸರ್ಕಾರ ಸೂಚನೆ ನೀಡಿದೆ. ಗಾಯಾಳುಗಳನ್ನು ಐಸಿಯುನಲ್ಲಿ ಇರಿಸಿ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಅವರ ಶೀಘ್ರ ಗುಣಮುಖಕ್ಕೆ ಎಲ್ಲಾ ನೆರವು ನೀಡುತ್ತೇವೆ. ಅದೃಷ್ಟವಶಾತ್ ಯಾರಿಗೂ ದೃಷ್ಟಿಗೆ ತೊಂದರೆ ಆಗಿಲ್ಲ.
ಮುಖ್ಯ ಇಂಜಿನಿಯರ್ ಗಳಿಂದ ಗಾಯಗೊಂಡವರು ಯುವಕರಾಗಿದ್ದು, ಅವರಿಗೆ ಉಜ್ವಲ ಭವಿಷ್ಯವಿದೆ. ಅವರಿಗೆ ಈ ರೀತಿ ಆಗಬಾರದಿತ್ತು.
ಈ ಅವಘಡಕ್ಕೆ ಸಂಬಂಧಿಸಿದಂತೆ ನಾನು ಯಾರ ಮೇಲೂ ದೂರಲು ಹೋಗುವುದಿಲ್ಲ. ಉಳಿದಂತೆ ನಾನು ತನಿಖೆ ಮುಗಿಯುವವರೆಗೂ ಯಾವುದರ ಬಗ್ಗೆ ಹೇಳಿಕೆ ನೀಡುವುದಿಲ್ಲ.
ಇದು ಪೂರ್ವನಿಯೋಜಿತ ಎಂಬ ವಿರೋಧ ಪಕ್ಷದ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಮಾತಾಡಬೇಕು ಮಾತನಾಡಲಿ ಬಿಡಿ” ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ