*ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದೇ ನಮ್ಮ ಆದ್ಯತೆ: ಡಿಸಿಎಂ ಡಿ.ಕೆ. ಶಿವಕುಮಾರ್*
ಉತ್ತಮ ಬೋಧನೆ ಮಡಿದ ಶಿಕ್ಷಕರಿಗೆ ಪ್ರಾತಿನಿಧ್ಯ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: “ಬೆಂಗಳೂರಿನಲ್ಲಿ ಬಡವರ ಮಕ್ಕಳು ಬಿಬಿಎಂಪಿ ಶಾಲೆಗಳಲ್ಲಿ ಓದುತ್ತಿದ್ದು ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡುವುದು ನಮ್ಮ ಆದ್ಯತೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಅತಿಥಿ ಉಪನ್ಯಾಸಕರು ಅಹವಾಲು ಸಲ್ಲಿಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಅತಿಥಿ ಉಪನ್ಯಾಸಕರು ಇಂದು ನನ್ನನ್ನು ಭೇಟಿ ಮಾಡಿ, ನಮ್ಮನ್ನು ಸೇವೆಯಲ್ಲಿ ಮುಂದುವರಿಸಬೇಕು ಎಂದು ಕೇಳಿಕೊಂಡಿದ್ದಾರೆ. ಸೆಕ್ಯುರಿಟಿ ಏಜೆನ್ಸಿ ಅವರು ಶಿಕ್ಷಕರನ್ನು ನೇಮಿಸುತ್ತಾರೆ ಎಂಬ ದೂರು ಬಂದಿದೆ. ಯಾರು ಯಾವ ಕೆಲಸ ಮಾಡಬೇಕೋ ಅವರು ಅದನ್ನೇ ಮಾಡಬೇಕು.
ಇಂದು ಆಗಮಿಸಿದವರಲ್ಲಿ ಉತ್ತಮವಾಗಿ ಬೋಧನೆ ಮಾಡುವ ಶಿಕ್ಷಕರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಈ ವಿಚಾರವಾಗಿ ಮತ್ತೆ ಪರಿಶೀಲನೆ ಮಾಡುತ್ತೇನೆ. ನಮಗೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ಬಹಳ ಮುಖ್ಯ.
ಬಿಬಿಎಂಪಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿದಿದೆ ಎಂಬ ಕಾರಣಕ್ಕೆ ಶಿಕ್ಷಣ ಇಲಾಖೆ ಸುಪರ್ದಿಗೆ ಈ ಶಾಲೆಗಳನ್ನು ನೀಡಿದ್ದೇವೆ. ಸರಿಯಾಗಿ ತರಬೇತಿ ಹೊಂದಿರುವ ಶಿಕ್ಷಕರನ್ನು ನೇಮಿಸಬೇಕಿದೆ. ಬಿಬಿಎಂಪಿ ವತಿಯಿಂದ ಎಲ್ಲಾ ಮೂಲಸೌಕರ್ಯ ಒದಗಿಸಲಾಗುವುದು, ಶಿಕ್ಷಣದ ಜವಾಬ್ದಾರಿಯನ್ನು ಇಲಾಖೆಗೆ ವಹಿಸಲಾಗಿದೆ” ಎಂದು ತಿಳಿಸಿದರು.
ಸಚಿವ ಭೈರತಿ ಸುರೇಶ್ ಅವರ ಭೇಟಿ ವಿಚಾರವಾಗಿ ಕೇಳಿದಾಗ, “ನಮ್ಮಲ್ಲಿ ಕೆಲವು ಯೋಜನಾ ಪ್ರಾಧಿಕಾರಗಳು ಇವೆ. ಅವುಗಳಿಗೆ ಕಾರ್ಯಕರ್ತರನ್ನು ನೇಮಕ ಮಾಡಬೇಕು. ನಾಲ್ವರು ಸದಸ್ಯರನ್ನು ನೇಮಿಸಿ, ಎಲ್ಲರಿಗೂ ಅವಕಾಶ ಮಾಡಿಕೊಡಬೇಕು. ಈ ದೃಷ್ಟಿಯಿಂದ ಮಾರ್ಗದರ್ಶನ ನೀಡಿದ್ದೇನೆ. ಇನ್ನು ಲೋಕಸಭೆ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ಹೆಸರು ಸೂಚನೆ ಜವಾಬ್ದಾರಿ ಸಚಿವರಿಗೆ ನೀಡಿದ್ದು, ಸಚಿವರ ಜೊತೆ ಚರ್ಚೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
ನಿಗಮ, ಮಂಡಳಿಗಳಿಗೆ ಯಾವಾಗ ನೇಮಕ ಆಗಲಿದೆ ಎಂದು ಕೇಳಿದಾಗ, “ಯಾವುದೇ ಕ್ಷಣದಲ್ಲಿ ಬೇಕಾದರೂ ಆಗಬಹುದು” ಎಂದು ತಿಳಿಸಿದರು.
ಕನ್ನಡ ನಾಮಫಲಕ ವಿಚಾರವಾಗಿ ಕನ್ನಡಪರ ಸಂಘಟನೆಗಳ ಹೋರಾಟದ ಬಗ್ಗೆ ಕೇಳಿದಾಗ, “ಕನ್ನಡ ಪರ ಸಂಘಟನೆಗಳು ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ಮಾಡಬೇಕು. ಹೋರಾಟದ ಹೆಸರಿನಲ್ಲಿ ಯಾರ ಆಸ್ತಿಪಾಸ್ತಿಗೂ ಹಾನಿ ಮಾಡಬಾರದು. ಬೆಂಗಳೂರಿಗೆ ಬಂದು ವ್ಯಾಪಾರ ಮಾಡಿ ಬದುಕುತ್ತಿರುವವರು ತಮ್ಮ ಮಳಿಗೆ ಬೋರ್ಡ್ ನಲ್ಲಿ 60 % ನಷ್ಟು ಕನ್ನಡ ಇರಬೇಕು ಎಂಬ ಕಾನೂನು ಇದ್ದು, ಯಾರು ಎಷ್ಟೇ ದೊಡ್ಡ ವ್ಯಾಪಾರಸ್ಥರಾದರೂ ಎಲ್ಲರೂ ಅದನ್ನು ಪಾಲನೆ ಮಾಡಬೇಕು” ಎಂದು ತಿಳಿಸಿದರು.
ಹಿಜಾಬ್ ವಿಚಾರವಾಗಿ ಕೇಳಿದಾಗ, “ನಾವು ಆ ವಿಚಾರವಾಗಿ ಆಲೋಚನೆ ಮಾಡಿಲ್ಲ. ಮಾಧ್ಯಮಗಳೇ ಇದನ್ನು ದೊಡ್ಡ ವಿಷಯ ಮಾಡುತ್ತಿವೆ. ಹಿಜಾಬ್ ವಿಚಾರವಾಗಿ ಚರ್ಚೆಗೆ ಬರುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾವನೆ ಎಲ್ಲಿದೆ?” ಎಂದು ಪ್ರಶ್ನಿಸಿದರು.
ಇಂಡಿಯಾ ಮೈತ್ರಿಕೂಟ ಲೋಕಸಭೆ ಚುನಾವಣೆ ಮುನ್ನವೇ ಮುರಿದು ಬೀಳಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ಎನ್ ಡಿಎ ಮೈತ್ರಿಕೂಟ ಮುರಿದು ಬೀಳಲಿದೆ” ಎಂದು ತಿಳಿಸಿದರು.
ಸಚಿವ ಶಿವಾನಂದ ಪಾಟೀಲ್ ವಿವಾದಾತ್ಮಕ ಹೇಳಿಕೆ ಬಗ್ಗೆ ಕೇಳಿದಾಗ, “ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ” ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಜನತೆಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ