ಹುಷಾರ್, ಇದು ರಾಷ್ಟ್ರೀಯ ಹೆದ್ದಾರಿ!
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಇತ್ತೀಚೆಗಷ್ಟೆ ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ ಮೂಲಕ ವಾಹನ ಸವಾರರ ನಿದ್ದೆಗೆಡಿಸಿದೆ ಸರಕಾರ. ಆದರೆ ಸಂಚಾರಕ್ಕೆ ಯೋಗ್ಯವಾದ ರಸ್ತೆ ಮಾಡಬೇಕೆನ್ನುವ, ರಸ್ತೆ ಕೆಟ್ಟರೆ ತುರ್ತಾಗಿ ದುರಸ್ತಿ ಮಾಡಬೇಕೆನ್ನುವ ಕಲ್ಪನೆಯೇ ಅಧಿಕಾರಿಗಳಿಗಿದ್ದಂತಿಲ್ಲ.
ರಸ್ತೆ ಹಾಳಾದರೆ, ರಸ್ತೆ ಹೊಂಡಗಳಿಂದ ವಾಹನ ಸವಾರರು ಪಡುವ ಪಾಡಿಗೆ ದಂಡವೆಷ್ಟು ಎಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಇದಕ್ಕೆ ಸರಕಾರದಿಂದ ಉತ್ತರವಿಲ್ಲ.
ಇಲ್ಲಿರುವ ಚಿತ್ರ ಯಾವುದೋ ಸಾಮಾನ್ಯ ರಸ್ತೆಯದ್ದಲ್ಲ. ಬೆಳಗಾವಿ -ಗೋವಾ ರಾಷ್ಟ್ರೀಯ ಹೆದ್ದಾರಿಯದ್ದು. ರಾಷ್ಟ್ರೀಯ ಹೆದ್ದಾರಿ ನಂಬರ್ 4 ಎ. ಬೆಳಗಾವಿ ನಗರ ವ್ಯಾಪ್ತಿ ಮುಗಿಯುವ ಮುನ್ನ ಇರುವ ಉದ್ಯಮಬಾಗ್ ಪ್ರದೇಶದ ಬಳಿ ರಸ್ತೆಯಲ್ಲಿ ದೊಡ್ಡ ಹೊಂಡ ಬಿದ್ದಿದೆ. ಈ ಹೊಂಡದಲ್ಲಿ ಬಿದ್ದು ಕಾಲು ಕೈ ಮುರಿದುಕೊಳ್ಳದಿರಲೆಂದು ಯಾರೋ ಟೈರ್ ಮತ್ತಿತರ ವಸ್ತುಗಳನ್ನು ಅಡ್ಡ ಹಾಕಿದ್ದಾರೆ.
ಆದರೆ ಸಂಬಂಧಪಟ್ಟ ಅಧಿಕಾರಿಗಳ್ಯಾರ ಕಣ್ಣಿಗೂ ಇದು ಬಿದ್ದಂತಿಲ್ಲ. ದುರಸ್ತಿ ಮಾಡುವ ಮಾತಂತೂ ದೂರವೇ ಉಳಿಯಿತು. ಈ ಮಾರ್ಗದಲ್ಲಿ ವಾಹನಗಳು ಅತ್ಯಂತ ವೇಗವಾಗಿ ಸಂಚರಿಸುತ್ತವೆ. ಸದಾ ವಾಹನ ದಟ್ಟಣೆ ಇರುವ ಪ್ರದೇಶವಿದು. ಆದರೆ ಅಧಿಕಾರಿಗಳು ಯಾವಾಗ ಇದನ್ನು ಸರಿಪಡಿಸುತ್ತಾರೆ ಕಾದು ನೋಡಬೇಕಿದೆ. ಅವರಿಗೂ ದಿನಕ್ಕೆ ಇಷ್ಟು ಎಂದು ದಂಡ ಹಾಕುವ ಪದ್ಧತಿ ಬಂದರೆ ಓಡಿ ಬಂದು ಕ್ರಮ ತೆಗೆದುಕೊಳ್ಳುತ್ತಾರೇನೋ….
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ