ಪ್ರಗತಿವಾಹಿನಿ ಸುದ್ದಿ, ನರಗುಂದ: ಚುನಾವಣೆಯಲ್ಲಿ ಮತದಾರರನ್ನು ಸೆಳೆಯುವ ಆಟ ರಾಜಕೀಯ ಪಕ್ಷಗಳಿಂದ ಭರ್ಜರಿಯಾಗೇ ನಡೆದಿದೆ. ಮತದಾರರಿಗೆ ಆಮಿಷವೊಡ್ಡುವ ತಂತ್ರಗಾರಿಕೆ ಮಟ್ಟ ಹಾಕಲು ಚುನಾವಣಾ ಆಯೋಗವೂ ಟೊಂಕ ಕಟ್ಟಿ ನಿಂತಿದೆ. ಈ ಮಧ್ಯೆಯೂ ಗದಗ ಜಿಲ್ಲೆಯ ನರಗುಂದದಲ್ಲಿ ಸದ್ಯ ರಾಜ್ಯದ ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರು ಮದ್ಯದಂಗಡಿ ಎದುರು ಮುಗಿಬಿದ್ದು ಖುಲ್ಲಂಖುಲ್ಲಾ ಬಿಯರ್ ಏಟು ಅನುಭವಿಸಿರುವುದು ಪಕ್ಷಕ್ಕೆ ಮುಜುಗರ ತಂದೊಡ್ಡಿದೆ.
ಪ್ರಸ್ತುತ ವಿಡಿಯೊವೊಂದು ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗಿದ್ದು ಇದರಲ್ಲಿ ನರಗುಂದದ ವೈನ್ ಶಾಪ್ ಒಂದರ ಮುಂದೆ ಬಿಜೆಪಿಯ ಧ್ವಜದಡಿಯೇ ಕೆಲ ಕಾರ್ಯಕರ್ತರು ‘ಸಿಕ್ಕಿದ್ದೇ ಸೀರುಂಡೆ’ ಎಂಬಂತೆ ಬಿಯರ್ ಗಾಗಿ ಮುಗಿಬಿದ್ದು ಕಂಠಪೂರ್ತಿ ಏರಿಸಿಕೊಂಡು ಸಂಭ್ರಮಿಸಿದ್ದಾರೆ. ಇದರಲ್ಲಿ ಬರಿಯ ಯುವಕರಷ್ಟೇ ಅಲ್ಲ, ಯುವ ಜನತೆಗೆ ಬುದ್ಧಿ ಹೇಳಬೇಕಾದ ಕೆಲ ಹಿರಿಯ ನಾಗರಿಕರೂ ಇದ್ದು ನಡುಬೀದಿಯಲ್ಲೇ ಬಾಟಲಿ ಏರಿಸಿದ್ದಾರೆ.
ವಿಡಿಯೊದಲ್ಲಿ ಹಿನ್ನೆಲೆ ದನಿಯೊಂದು ಕೇಳಿಬಂದಿದ್ದು ವ್ಯಕ್ತಿಯೊಬ್ಬರು “ಶಿವಶಿವಾ.. ಎಂಥಾ ಪರಿಸ್ಥಿತಿ ಬಂತು ಈ ಬಿಜೆಪಿ ಸರಕಾರದಲ್ಲಿ.. ಮೋದಿಯವರು ನೋಡಬೇಕು ಇದನ್ನ.. ಅಯ್ಯೋ.. ಬೇರೆಯವರಿಗೆ ವೇದಾಂತ ಹೇಳ್ತಾರ ಇವ್ರು..” ಎಂದು ಕನಿಕರ ವ್ಯಕ್ತಪಡಿಸುತ್ತಿದ್ದಾರೆ.
ಇವರೆಲ್ಲ ಬಿಜೆಪಿಯ ಸಮಾವೇಶವೊಂದರಲ್ಲಿ ಭಾಗವಹಿಸಲು ಬಂದವರೆಂದು ಹೇಳಲಾಗಿದೆ. ಆದರೆ ಸಾವಿರಾರು ಜನ ಸಂಚರಿಸುವ ನಡು ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರ ಬಿಯರ್ ಸಮಾರಾಧನೆ ಬಗ್ಗೆ ಆಕ್ರೋಶಗಳು ವ್ಯಕ್ತವಾಗಿವೆ. ಅಲ್ಲಿ ಇಲ್ಲಿ ಕದ್ದು ಮುಚ್ಚಿ ನಡೆಯುವ ಆಮಿಷ ತಂತ್ರಗಳಿಗೆ ಮೂಗುದಾರ ಹಾಕುತ್ತಿರುವ ಚುನಾವಣಾ ಅಧಿಕಾರಿಗಳಿಗೆ ನಡುಬೀದಿಯಲ್ಲಿ ನಡೆದ ಈ ಘಟನೆ ಆ ಕ್ಷಣದಲ್ಲಿ ಗಮನಕ್ಕೆ ಬರಲಿಲ್ಲವೇ ಎಂಬ ಪ್ರಶ್ನೆಗಳೂ ಕೇಳಿಬಂದಿವೆ.
ವಿಡಿಯೊ ವೈರಲ್ ಆಗುತ್ತಿದ್ದಂತೆ ಬಿಜೆಪಿ ತೀವ್ರ ಮುಜುಗರ ಅನುಭವಿಸುತ್ತಿದೆ. ಪ್ರತಿಪಕ್ಷದವರಿಗೆ ಚುನಾವಣೆ ಕಾಲಕ್ಕೆ ಇದೊಂದು ಅಸ್ತ್ರವಾಗಿಯೂ ಪರಿಣಮಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ