
ಪ್ರಗತಿವಾಹಿನಿ ಸುದ್ದಿ: ಅಯೋಧ್ಯೆಯ ರಾಮ ಮಂದಿರ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ 14 ವರ್ಷದ ಬಾಲಕನನ್ನು ಬಂಧಿಸಿಲಾಗಿದೆ ಎಂದು ಕುಶಿನಗರ ಪೊಲೀಸ್ ವರಿಷ್ಠಾಧಿಕಾರಿ ಧವಲ್ ಜೈಸ್ವಾಲ್ ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಪೊಲೀಸ್ ತುರ್ತು ಸಂಖ್ಯೆ ‘112’ಗೆ ಕರೆ ಮಾಡಿದ ಬಾಲಕ ದೇವಸ್ಥಾನವನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಜೊತೆಗೆ ತನ್ನ ಇನ್ಸ್ಟಾಗ್ರಾಂ ಮತ್ತು ಇತರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಇದೇ ರೀತಿಯ ಸಂದೇಶಗಳೊಂದಿಗೆ ಪೋಸ್ಟ್ ಮಾಡಿದ್ದ. ಸೈಬರ್ ಸೆಲ್ ಸಹಾಯದಿಂದ ಪೊಲೀಸರು ಕುಶಿನಗರದ ಪಥೇರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬಲುವಾ ಟಾಕಿಯಾ ಎಂಬ ಹಳ್ಳಿಯಲ್ಲಿದ್ದ ಬಾಲಕನನ್ನು ಬಂಧಿಸಿದ್ದಾರೆ.
ವಿಶೇಷ ಕಾರ್ಯಾಚಣೆ ನಡೆಸಿದ ಪೊಲೀಸರು ಬಾಲಕನ ಜೊತೆಗೆ ಆತನ ಅಜ್ಜಿಯನ್ನು ವಶಕ್ಕೆ ಪಡೆದಿದ್ದಾರೆ. ಬಾಲಕನಿಗೆ ಬೌದ್ಧಿಕ ನ್ಯೂನತೆ ಇದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಕುಶಿನಗರ ಪೊಲೀಸ್ ವರಿಷ್ಠಾಧಿಕಾರಿ ಧವಲ್ ಜೈಸ್ವಾಲ್ ತಿಳಿಸಿದ್ದಾರೆ.