*ಬೆಳಗಾವಿ ಗಣೇಶೋತ್ಸವ: ಅನುಮತಿಗೆ 12 ಕಡೆ ಏಕಗವಾಕ್ಷಿ ವ್ಯವಸ್ಥೆಗೆ ಡಿಸಿ ಮೊಹಮ್ಮದ್ ರೋಷನ್ ಸೂಚನೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗಣೇಶೋತ್ಸವ ಮಂಡಳಿಗಳಿಗೆ ಸುಲಭವಾಗಿ ಹಾಗೂ ಶೀಘ್ರವಾಗಿ ಒಂದೇ ಕಡೆ ಅನುಮತಿ ನೀಡಲು ಅನುಕೂಲವಾಗುವಂತೆ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ 12 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಆಯಾ ಪೊಲೀಸ್ ಠಾಣೆಗಳಲ್ಲಿಯೇ ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ(ಆ.31) ಜರುಗಿದ ಗಣೇಶ ಉತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೆಸ್ಕಾಂ, ಪೊಲೀಸ್, ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಆಯಾ ಪೊಲೀಸ್ ಠಾಣೆಯ ಏಕಗವಾಕ್ಷಿ ಕೇಂದ್ರದಲ್ಲಿ ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಉಪಸ್ಥಿತರಿದ್ದು, ಅಗತ್ಯ ಅನುಮತಿಯನ್ನು ನೀಡಲಿದ್ದಾರೆ ಎಂದು ಹೇಳಿದರು.
ಈ ಕುರಿತು ಏಕಗವಾಕ್ಷಿ ತಂಡಗಳಿಗಾಗಿ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದಂತೆ ಗಣೇಶ ಮಂಟಪಗಳನ್ನು ನಿರ್ಮಿಸಬೇಕು.
ಸಾರ್ವಜನಿಕರ ಸಂಚಾರಕ್ಕೆ, ಮಹಾನಗರ ಪಾಲಿಕೆಯ ಕಸ ವಿಲೇವಾರಿ ಹಾಗೂ ಅಂಬ್ಯುಲೆನ್ಸ್ ಸಂಚಾರಕ್ಕೆ ತೊಂದರೆಯಾಗದಂತೆ ಮಂಟಪದ ಅಳತೆಯು ಮಿತಿಯೊಳಗೆ ಇರುವಂತೆ ನಿಗಾವಹಿಸಬೇಕು.
ಗಣೇಶ ಮೂರ್ತಿಗಳ ಆಗಮನ ಹಾಗೂ ವಿಸರ್ಜನೆ ಸಂದರ್ಭದಲ್ಲಿ ರಸ್ತೆಯಲ್ಲಿನ ವಿದ್ಯುತ್ ಹಾಗೂ ವಿವಿಧ ದೂರ ಸಂಪರ್ಕ ಕೆಬಲಗಳನ್ನು ಮೇಲಸ್ಥರಕ್ಕೆ ಎತ್ತರಿಸಲು ಸೂಚಿಸಿದ ಅವರು, ಅರಣ್ಯ ಇಲಾಖೆ ವತಿಯಿಂದ ರೆಂಬೆಗಳನ್ನು ಕತ್ತರಿಸಲು ಕ್ರಮವಹಿಸಬೇಕು.
ಹೆಸ್ಕಾಂ, ಪೋಲಿಸ, ಪಾಲಿಕೆ, ಅರಣ್ಯ, ಅಗ್ನಿಶಾಮಕ, ಬಿ.ಎಸ್.ಎನ್.ಎಲ್ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಮೆರವಣಿಗೆ ಮಾರ್ಗದಲ್ಲಿ ಜಂಟಿಯಾಗಿ ಸಮೀಕ್ಷೆ ಜರುಗಿಸಿ ನಿಖರವಾದ ವರದಿಯನ್ನು ಒದಗಿಸಲು ಸೂಚಿಸಿದರು.
ಪಾಲಿಕೆ ವತಿಯಿಂದ ಗಣೇಶ ಆಗಮನ ಹಾಗೂ ವಿಸರ್ಜನೆ ಮಾರ್ಗದಲ್ಲಿನ ರಸ್ತೆ ದುರಸ್ತಿಗೆ ಕ್ರಮ ವಹಿಸಬೇಕು. ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲು ಕೂಡಲೆ ಕ್ರಮ ವಹಿಸಿ, ಕತ್ತಲೆ ಹೆಚ್ಚಿರುವ ಪ್ರದೇಶಗಳಲ್ಲಿ ಬೆಳಕಿನ ವ್ಯವಸ್ಥೆ, ಕಣ್ಗಾವಳು ಸ್ಥಾವರ ಹಾಗೂ ಸಾರ್ವಜನಿಕರ ಗ್ಯಾಲರಿ ನಿರ್ಮಾಣಕ್ಕೆ ಸೂಕ್ತ ವ್ಯವಸ್ಥೆ ಮಾಡಲು ಸೂಚಿಸಿದರು.
ನಗರದಲ್ಲಿ ಬಂಟ್ಟಿಂಗ್, ಬ್ಯಾನರ್ ಅಳವಡಿಕೆ ಕುರಿತು ನೀಡಲಾಗುವ ಅನುಮತಿಗಳ ವಿವರಗಳನ್ನು ಪೋಲಿಸ್ ಇಲಾಖೆಗೆ ನೀಡಲು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಪಿ.ಓ.ಪಿ ಗಣೇಶ ಮೂರ್ತಿಗಳ ಬಳಸದಂತೆ ಪಾಲಿಕೆಯ ವಾಹನಗಳಲ್ಲಿ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.
ಪೊಲೀಸ ಆಯುಕ್ತರಾದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಮಾತನಾಡಿ, ಪೋಲಿಸ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು. ಪೋಲಿಸ್ ಇಲಾಖೆ ಹಾಗೂ ವಿವಿಧ ಇಲಾಖೆಗಳು ಜಂಟಿಯಾಗಿ ನಗರದಲ್ಲಿ ಸಂಚರಿಸಿ ಗಣೇಶ ಪ್ರತಿಷ್ಠಾನ ಮಂಟಪಗಳ ಹಾಗೂ ಮೆರವಣಿಗೆಯ ಸ್ಥಳಗಳ ಕುರಿತು ಸಮೀಕ್ಷೆ ನಡೆಸಲು ಸೂಚಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಡಿ.ಸಿ.ಪಿ. ರೋಹನ ಜಗದೀಶ, ಎಸಿಪಿ ಶ್ರೀಕಾಂತ ಕಟ್ಟಿಮನಿ, ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ ಸೇರಿದಂತೆ ಹೆಸ್ಕಾಂ, ಪೊಲೀಸ್, ಅರಣ್ಯ, ಅಗ್ನಿಶಾಕಮ ದಳ, ಆರೋಗ್ಯ, ಕಂದಾಯ, ಬಿಎಸ್ ಎನ್ ಎಲ್, ಮಹಾನಗರ ಪಾಲಕೆ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಕಪಿಲೇಶ್ವರ ಹೊಂಡಕ್ಕೆ ಜಿಲ್ಲಾಧಿಕಾರಿ ಭೇಟಿ
ಸಭೆಯ ಬಳಿಕ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ನಗರದ ಕಪಿಲೇಶ್ವರ ಹೊಂಡಕ್ಕೆ ಭೇಟಿ ನೀಡಿ, ಗಣೇಶ ವಿಸರ್ಜನೆಗೆ ಸಂಬಂಧಿಸಿದಂತೆ ಸಿದ್ಧತೆಗಳನ್ನು ಪರಿಶೀಲಿಸಿದರು.
ಪ್ರತಿವರ್ಷದಂತೆ ಸ್ವಚ್ಛತೆ, ಬೆಳಕಿನ ವ್ಯವಸ್ಥೆ, ಭದ್ರತೆ ಮತ್ತಿತರ ವ್ಯವಸ್ಥೆಗಳನ್ನು ಸಮರ್ಪಕವಾಗಿ ಕಲ್ಪಿಸುವಂತೆ ನಿರ್ದೇಶನ ನೀಡಿದರು.
ನಗರ ಪೊಲೀಸ್ ಆಯುಕ್ತರಾದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಡಿ.ಸಿ.ಪಿ. ರೋಹನ ಜಗದೀಶ, ಎಸಿಪಿ ಶ್ರೀಕಾಂತ ಕಟ್ಟಿಮನಿ ಮತ್ತಿತರರು ಉಪಸ್ಥಿತರಿದ್ದರು.
ಗಣೇಶೋತ್ಸವ ಮಂಡಳಿಗಳಿಗೆ ಸುಲಭವಾಗಿ ಹಾಗೂ ಶೀಘ್ರವಾಗಿ ಒಂದೇ ಕಡೆ ಅನುಮತಿ ನೀಡಲು ಅನುಕೂಲವಾಗುವಂತೆ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ 12 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಆಯಾ ಪೊಲೀಸ್ ಠಾಣೆಗಳಲ್ಲಿಯೇ ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ