Advertisement -Home Add

ಹಿಡಕಲ್ ಜಲಾಶಯದಿಂದ 6.80 ಟಿಎಂಸಿ ನೀರು ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ಜಿಎಲ್‌ಬಿಸಿಗೆ ೨೪೦೦ ಕ್ಯೂಸೆಕ್ಸ್, ಜಿಆರ್‌ಬಿಸಿಗೆ ೨೦೦೦ ಕ್ಯೂಸೆಕ್ಸ್ ಮತ್ತು ಸಿಬಿಸಿಗೆ ೫೫೦ ಕ್ಯೂಸೆಕ್ಸ್ ನೀರು

 ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ : ಹಿಡಕಲ್ ಜಲಾಶಯದಿಂದ ಇಂದಿನಿಂದ ೧೫ ದಿನಗಳವರೆಗೆ ರೈತರ ಕೃಷಿ ಜಮೀನುಗಳಿಗೆ ನೀರು ಹಾಯಿಸಲು ೬.೮೦ ಟಿಎಂಸಿ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.
ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಈ ಬಗ್ಗೆ ಅಧಿಕಾರಿಗಳಿಗೆ ಆದೇಶ ನೀಡಿದ್ದು, ಶನಿವಾರ ಬೆಳಿಗ್ಗೆ ೧೦.೩೦ ಗಂಟೆಗೆ ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆಯಾಗಿದೆ ಎಂದು ಅವರು ಹೇಳಿದ್ದಾರೆ.
ಘಟಪ್ರಭಾ ಎಡದಂಡೆ ಕಾಲುವೆಗೆ ೨೪೦೦ ಕ್ಯೂಸೆಕ್ಸ್, ಘಟಪ್ರಭಾ ಬಲದಂಡೆ ಕಾಲುವೆಗೆ ೨೦೦೦ ಕ್ಯೂಸೆಕ್ಸ್ ಮತ್ತು ಸಿಬಿಸಿ ಕಾಲುವೆಗೆ ೫೫೦ ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗಿದೆ. ನ.೨೧ ರಿಂದ ಡಿ.೫ ರವರೆಗೆ ಒಟ್ಟು ೧೫ ದಿನಗಳವರೆಗೆ ಸುಮಾರು ೬.೮೦ ಟಿಎಂಸಿ ನೀರನ್ನು ಹರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಗೋಕಾಕ, ಮೂಡಲಗಿ, ರಾಯಬಾಗ, ಮುಧೋಳ, ಬೀಳಗಿ, ಜಮಖಂಡಿ ತಾಲೂಕುಗಳ ರೈತರು ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಅನಾವಶ್ಯಕವಾಗಿ ನೀರನ್ನು ಪೋಲು ಮಾಡಬಾರದು. ಕೃಷಿ ಜಮೀನುಗಳಿಗೆ ಅನುಕೂಲವಾಗಲು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಹಿಡಕಲ್ ಜಲಾಶಯದಿಂದ ಎಲ್ಲ ಕಾಲುವೆಗಳಿಗೆ ನೀರು ಹರಿಸಲು ಅಧಿಕಾರಿಗಳಿಗೆ ಅವರು ಆದೇಶ ನೀಡಿದ್ದಾರೆ. ಅದಕ್ಕಾಗಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಸಮಸ್ತ ರೈತ ಬಾಂಧವರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.