ಜಾರಕಿಹೊಳಿ-ನಿಖಿಲ್ ಕುಮಾರಸ್ವಾಮಿ ಜಂಟಿ ಸಮೀಕ್ಷೆ!

ಸರಕಾರ ಕೆಡವುತ್ತೇನೆಂದ ಬಾಲಚಂದ್ರ ವೀಡಿಯೋ ವೈರಲ್

ಜಾರಕಿಹೊಳಿ-ನಿಖಿಲ್ ಕುಮಾರಸ್ವಾಮಿ ಜಂಟಿ ಸಮೀಕ್ಷೆ!

ಪ್ರಗತಿವಾಹಿನಿ ಸುದ್ದಿ, ಮೂಡಲಗಿ:

ಜಲಪ್ರವಾಹದಿಂದಾಗಿ ಕ್ಷೇತ್ರದ 30ಕ್ಕೂ ಅಧಿಕ ನದಿತೀರದ ಗ್ರಾಮಗಳು ಮುಳುಗಡೆಯಾಗಿದ್ದು, ಇದರಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿ, ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಯಾಗಿವೆ. ಈ ಭಾಗದಲ್ಲಿ ಕಬ್ಬು ಪ್ರಮುಖ ಬೆಳೆಯಾಗಿದ್ದರಿಂದ ಮಳೆಯ ಆರ್ಭಟಕ್ಕೆ ಸಂಪೂರ್ಣವಾಗಿ ನೀರು ಪಾಲಾಗಿದೆ. ನಿರಾಶ್ರಿತರ ಕೂಗಿನ ಹಿನ್ನೆಲೆಯಲ್ಲಿ ನಷ್ಟಕ್ಕೊಳಗಾದ ಕಬ್ಬಿನ ಬೆಳೆಗಳಿಗೂ ಸಹ ಪರಿಹಾರ ದೊರಕಿಸಿಕೊಡಲು ಯತ್ನಿಸುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.


ಸೋಮವಾರ ರಾತ್ರಿ ಸಮೀಪದ ಹುಣಶ್ಯಾಳ ಪಿ.ವಾಯ್. ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಈ ಭಾಗ ಪೂರ್ಣ ಪ್ರಮಾಣದಲ್ಲಿ ನೀರಾವರಿಗೆ ಒಳಪಟ್ಟಿದ್ದರಿಂದ ಕಬ್ಬಿನ ಬೆಳೆ ಪೂರ್ಣ ನಾಶವಾಗಿದೆ. ಅದರ ಪರಿಹಾರ ನೀಡುವಲ್ಲಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಪ್ರವಾಹದ ರುದ್ರನರ್ತನಕ್ಕೆ ಇಲ್ಲಿಯ ನೂರಾರು ಮನೆಗಳು ಕೊಚ್ಚಿಕೊಂಡು ಹೋಗಿವೆ. ನಿರಾಶ್ರಿತರಿಗೆ ಮನೆಗಳನ್ನು ನಿರ್ಮಿಸಿಕೊಡುವ ವ್ಯವಸ್ಥೆ ಮಾಡಿಕೊಡುತ್ತೇನೆ. ಈಗಾಗಲೇ ಗಂಜಿ ಕೇಂದ್ರಗಳಲ್ಲಿರುವ ನಿರಾಶ್ರಿತರಿಗೆ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ. ಅಲ್ಲದೇ ನಿರಾಶ್ರಿತರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಬಟ್ಟೆಗಳನ್ನು ನೀಡುತ್ತೇನೆ. ಯಾರು ಕೂಡಾ ಇದರಿಂದ ಭಯಭೀತರಾಗಬೇಡಿ. ತಾತ್ಕಾಲಿಕವಾಗಿ ಪರಿಹಾರ ನೀಡುವ ವ್ಯವಸ್ಥೆ ಮಾಡುತ್ತೇನೆಂದು ಹೇಳಿದರು.
ನದಿತೀರದ ಗ್ರಾಮಗಳಿಗೆ ಅಪ್ಪಳಿಸಿರುವ ಜಲಪ್ರವಾಹ ನಿಜಕ್ಕೂ ದುರಂತ ಘಟನೆ. ಇತಿಹಾಸದಲ್ಲಿ ಇದೊಂದು ಕರಾಳವೆಂದು ಹೇಳಬಹುದು. ಇದರಿಂದ ನಮ್ಮ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂಗಳಷ್ಟು ಆಸ್ತಿ-ಪಾಸ್ತಿ ಹಾನಿಯಾಗಿದೆ. ನಿರಾಶ್ರಿತರೊಂದಿಗೆ ಸದಾ ಕಾಲ ನಾವಿದ್ದೇವೆ. ಅಂಜುವ ಅವಶ್ಯಕತೆ ಇಲ್ಲ. ನಿಮಗೆ ಪರಿಹಾರ ನೀಡುವ ಜವಾಬ್ದಾರಿ ನನ್ನದು. ದೇವರನ್ನು ನಂಬಿ. ಎಲ್ಲವೂ ಸರಿ ಹೋಗುತ್ತದೆ ಎಂದು ನಿರಾಶ್ರಿತರಿಗೆ ಅಭಯ ನೀಡಿದರು.

ಹೃದಯವಂತ ಶಾಸಕ ಬಾಲಚಂದ್ರ ಜಾರಕಿಹೊಳಿ

 

ನಿರಾಶ್ರಿತರ ಗಂಜಿ ಕೇಂದ್ರಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ ಕುಮಾರಸ್ವಾಮಿ ಅವರು ಪರಸ್ಪರ ಭೇಟಿಯಾದರು.

ಜಂಟಿಯಾಗಿಯೇ ನಿರಾಶ್ರಿತರಿಗೆ ಅಗತ್ಯ ವಸ್ತುಗಳನ್ನು ವಿತರಿಸಿದರು. ಬಾಲಚಂದ್ರ ಅಣ್ಣಾವ್ರು ನಮಗೆಲ್ಲ ಹಿರಿಯ ಅಣ್ಣನಂತೆ ಇದ್ದಾರೆ. ನಮ್ಮಂತಹ ಯುವಕರಿಗೆ ಮಾರ್ಗದರ್ಶಿಯಾಗಿದ್ದಾರೆ. ನಿರಾಶ್ರಿತರ ಕೇಂದ್ರಗಳಿಗೆ ವಿಶ್ರಾಂತಿ ಇಲ್ಲದೇ ಭೇಟಿ ನೀಡಿ ಅವರ ಕಷ್ಟಕಾರ್ಪಣ್ಯಗಳನ್ನು ವಿಚಾರಿಸುತ್ತಿರುವ ಅವರ ಕಾರ್ಯವನ್ನು ನಾವೆಲ್ಲರೂ ಮೆಚ್ಚಲೇಬೇಕು ಎಂದು ನಿಖಿಲಕುಮಾರ ಅವರು, ಬಾಲಚಂದ್ರ ಜಾರಕಿಹೊಳಿ ಅವರ ಬಗ್ಗೆ ಅಭಿಮಾನದ ಮಾತುಗಳನ್ನಾಡಿದರು.

ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಾ, ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿರುವ ಹೃದಯವಂತ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸೇವೆಯನ್ನು ಶ್ಲಾಘಿಸಿದರು.

ನಮಗೆ ಉತ್ತರ-ದಕ್ಷಿಣ ಎಂಬ ಬೇಧ-ಭಾವವಿಲ್ಲ, ಮಾನವೀಯ ನೆಲೆಗಟ್ಟಿನ ಮೇಲೆ ಎಚ್.ಡಿ.ಕುಮಾರಸ್ವಾಮಿ  ಅವರ ಸಲಹೆ ಮೇರೆಗೆ ನಿರಾಶ್ರಿತರ ನೆರವಿಗೆ ಧಾವಿಸಿ ಬಂದಿದ್ದೇವೆ. ನಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದೇವೆ. ಇದರಲ್ಲಿ ರಾಜಕಾರಣ ಮಾಡುವ ಅವಶ್ಯಕತೆ ನಮಗಿಲ್ಲ. ಈ ಭೀಕರ ಪ್ರವಾಹದಿಂದ ನಿರಾಶ್ರಿತರು ದೃತಿಗೆಡಬೇಕಾಗಿಲ್ಲ. ಧೈರ್ಯವಾಗಿ ಬದುಕು ಸಾಗಿಸುವಂತೆ ನಿಖಿಲ ಕುಮಾರ ನಿರಾಶ್ರಿತರಲ್ಲಿ ಕೋರಿದರು.

ಇದೇ ಸಂದರ್ಭದಲ್ಲಿ ನಿರಾಶ್ರಿತರಿಗೆ ದಿನನಿತ್ಯ ಉಪಯೋಗಿಸುವ ಸಾಮಗ್ರಿಗಳನ್ನು ವಿತರಿಸಲಾಯಿತು.
ಮಾಜಿ ಶಾಸಕ ಎಚ್.ಎನ್.ಕೋನರೆಡ್ಡಿ, ಜಿ.ಪಂ ಸದಸ್ಯ ಗೋವಿಂದ ಕೊಪ್ಪದ, ಜಿ.ಪಂ ಮಾಜಿ ಸದಸ್ಯರಾದ ರಾಜೇಂದ್ರ ಸಣ್ಣಕ್ಕಿ, ಶಂಕರ ಮಾಡಲಗಿ, ಎಪಿಎಮ್‌ಸಿ ಮಾಜಿ ಅಧ್ಯಕ್ಷ ಎ.ಟಿ.ಗಿರೆಡ್ಡಿ, ಪ್ರಕಾಶ ಸೋನವಾಲ್ಕರ, ಸುಭಾಸ ಪೂಜೇರಿ ಇದ್ದರು.

 

ವೈರಲ್ ಆದ ವೀಡಿಯೋ –

ನಿರಾಶ್ರಿತರೊಂದಿಗೆ ಮಾತನಾಡುವಾಗ ಬಾಲಚಂದ್ರ ಜಾರಕಿಹೊಳಿ ಆಡಿದ ಮಾತೊಂದು ಈಗ ವೈರಲ್ ಆಗಿದೆ. ನಿಮಗೆ ಮನೆಗಳನ್ನು ಕಟ್ಟಿಸಿಕೊಡುವ ಜವಾಬ್ದಾರಿ ನಮ್ಮದು. ಸರಕಾರ ಮನೆ ಕಟ್ಟಿಸಿಕೊಡದಿದ್ದರೆ ಸರಕಾರವನ್ನೇ ಕೆಡವುತ್ತೇವೆ ಎಂದು ಹೇಳಿದ್ದರು.

.