Kannada NewsLatest

ಒಂದು ವರ್ಷದೊಳಗೆ ಬೆಳಗಾವಿ ಬಸ್ ನಿಲ್ದಾಣ ಕಾಮಗಾರಿ ಪೂರ್ಣ: ಸಚಿವ ಗೋವಿಂದ ಕಾರಜೋಳ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮೂವತ್ತು ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿ ಬಸ್ ನಿಲ್ದಾಣ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು, ಕೋವಿಡ್-19ರ ಲಾಕ್‌ಡೌನ್ ಕಾರಣದಿಂದಾಗಿ ಕಾಮಗಾರಿ ವಿಳಂಭವಾಗಿದೆ. ಎರಡನೇ ಅಲೆಯ ನಂತರ ಕಾಮಗಾರಿ ಚುರುಕುಗೊಂಡಿದೆ. ಶೇ. 20 ರಷ್ಟು ಕೆಲಸಗಳು ಪೂರ್ಣಗೊಂಡಿವೆ. ಇನ್ನೂ ಒಂದು ವರ್ಷದೊಳಗೆ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ವಿಧಾನ ಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಇಂದು ಶಾಸಕ ಅನೀಲ ಬೆನಕೆ ಅವರ ಪ್ರಶ್ನೆಗೆ ಸಾರಿಗೆ ಸಚಿವರ ಪರವಾಗಿ ಉತ್ತರಿಸಿ ಮಾತನಾಡಿದರು. ಮೂವತ್ತು ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ನಗರ ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್) ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದ ತಲಾ ಶೇ.50 ರಷ್ಟು ಹಣಕಾಸು ಕ್ರೋಢಿಕರಣ ಮಾಡಲಾಗಿದೆ. ಮಳೆಗಾಲ ಹೊರತುಪಡಿಸಿ ಇಪ್ಪತ್ತನಾಲ್ಕು ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕರಾರು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಕಾಮಗಾರಿಯನ್ನು ಸಧ್ಯವಿರುವ ಬಸ್ ನಿಲ್ದಾಣದ ಜಾಗೆಯಲ್ಲಿಯೇ ಕೈಗೊಳ್ಳಲಾಗಿದೆ. ಹಂತ ಹಂತವಾಗಿ ಬಸ್‌ಗಳ ಕಾರ್ಯಾಚರಣೆ ಹಾಗೂ ಸಾರ್ವಜನಿಕ ಪ್ರಯಾಣಿಕರಿಗೆ ತೊಂದರೆಯಾಗದ ರೀತಿಯಲ್ಲಿ ಸುರಕ್ಷಿತ ಕ್ರಮಗಳನ್ನು ಅಳವಡಿಸಿಕೊಂಡು ಕಾಮಗಾರಿ ನಡೆಸುತ್ತಿರುವದರಿಂದ ವಿಳಂಭವಾಗುತ್ತಿದೆ. ಜೊತೆಗೆ ನಗರ ಸಾರಿಗೆ ಬಸ್ ನಿಲ್ದಾಣವನ್ನು ಸ್ಮಾರ್ಟ ಸಿಟಿ ಯೋಜನೆಯಡಿ ಹೊಸದಾಗಿ ನಿರ್ಮಿಸುತ್ತಿರುವದರಿಂದ ಅಲ್ಲಿನ ಬಸ್‌ಗಳನ್ನು ಕೂಡ ಕೇಂದ್ರ ಬಸ್ ನಿಲ್ದಾಣದಿಂದಲೇ ಕಾರ್ಯಾಚರಣೆ ಮಾಡಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಅಕಾಲಿಕ ಮಳೆ, ಕೋವಿಡ್-19 ರ ಕಾರಣದಿಂದ ಕಾಮಗಾರಿ ವಿಳಂಭವಾಗಿದೆ. ಗುತ್ತಿಗೆದಾರರಿಗೆ ಹಲವಾರು ಬಾರಿ ನೋಟಿಸ್ ನೀಡಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಒಂದು ವರ್ಷದ ಅವಧಿಯೊಳಗೆ ಪೂರ್ಣಗೊಳಿಸಲಾಗುವದು ಎಂದು ತಿಳಿಸಿದರು.
ಇಂಚಲ-ಮರಕುಂಬಿ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ: ಸಚಿವ ಕೆ.ಎಸ್.ಈಶ್ವರಪ್ಪ
ಬೆಳಗಾವಿ: ಬೈಲಹೊಂಗಲ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಸವದತ್ತಿ ತಾಲೂಕಿನ ಇಂಚಲ-ಮರಕುಂಬಿ 5 ಕಿ.ಮೀ. ಗ್ರಾಮೀಣ ರಸ್ತೆಯನ್ನು 1.65 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಕಂದಾಯ ಮತ್ತು ಆರ್ಥಿಕ ಇಲಾಖೆಗೆ ಪ್ರಸ್ತಾವಣೆ ಸಲ್ಲಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಹೇಳಿದರು.

ವಿಧಾನ ಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಇಂದು ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ ಅವರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು. ಬೆಳಗಾವಿ ಜಿಲ್ಲೆ ಬೈಲಹೊಂಗಲದ ಮತಕ್ಷೇತ್ರದ ಸವದತ್ತಿ ತಾಲೂಕಿನ ಇಂಚಲ-ಮರಕುಂಬಿ 5 ಕಿ.ಮಿ. ರಸ್ತೆಯು ಮಳೆಯಿಂದ ಹಾಳಾಗಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವದು ಸರಕಾರದ ಗಮನಕ್ಕೆ ಬಂದಿದ್ದು ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಸುಮಾರು 1.65 ಕೋಟಿ ರೂ. ಅನುದಾನದ ಅವಶ್ಯಕತೆವಿರುತ್ತದೆ. 2020-21ನೇ ಸಾಲಿನಲ್ಲಿ ಲಿಂಕ್ ಡಾಕ್ಯೂಮೆಂಟರಡಿ 3 ಲಕ್ಷ ರೂ.ಗಳ ಮೊತ್ತದಲ್ಲಿ ಮೇಲಿನ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಪಡಿಸಲಾಗಿದೆ. ಅಲ್ಲದೇ ಈ ಇಂಚಲ-ಮರಕುಂಬಿ ರಸ್ತೆ ಒಳಗೊಂಡಂತೆ ಮಳೆಯಿಂದ ಹಾನಿಗೊಳಗಾಗಿರುವ ರಸ್ತೆ ಮತ್ತು ಸೇತುವೆಗಳ ದುರಸ್ತಿಗೆ ಅನುದಾನವನ್ನು ಒದಗಿಸುವಂತೆ ಕಂದಾಯ ಮತ್ತು ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು ಅನುದಾನ ಲಭ್ಯವಾದ ನಂತರ ಕಾಮಗಾರಿಯನ್ನು ಕೈಗೊಳ್ಳಲಾಗುವದು ಎಂದು ತಿಳಿಸಿದರು.
ವಿಧಾನಮಂಡಲ ಅಧಿವೇಶನ ಅವಧಿ ವಿಸ್ತರಣೆ ಕುರಿತು ಚರ್ಚಿಸಿ ತೀರ್ಮಾನ – ಸಿಎಂ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button