*ನಾವು ಹುಟ್ಟಿನಿಂದಲೇ ಹಿಂದುಗಳು, ಬಿಜೆಪಿಯವರಂತೆ ನಾಟಕೀಯ ಹಿಂದುತ್ವ ನಮ್ಮದಲ್ಲ ಎಂದ ಡಿ.ಕೆ. ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ‘ನಾವೆಲ್ಲರೂ ಹುಟ್ಟುತ್ತಲೇ ಹಿಂದೂಗಳು, ಸಾಯುವಾಗಲೂ ಹಿಂದೂಗಳೇ, ಹಿಂದೂ ಆಚರಣೆಗಳನ್ನೇ ಪಾಲಿಸುತ್ತಾ ಬಂದಿದ್ದೇವೆ. ನಮ್ಮಲ್ಲಿ ಹಿಂದೂ ಭಾವ, ಭಕ್ತಿ, ಆಚಾರ, ವಿಚಾರ, ಅಡಗಿದೆ. ಆದರೆ ಬಿಜೆಪಿಯವರು ನಾಟಕದ ಹಿಂದುತ್ವ ತೋರಿಸುತ್ತಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಈ ನಾಡಿನ ಮಹನೀಯರ ಭಾವಚಿತ್ರಗಳನ್ನು ವಿಧಾನಸಭೆಯಲ್ಲಿ ಅಳವಡಿಸಬೇಕು ಎಂದು ಕಾಂಗ್ರೆಸ್ ನಾಯಕರು ಸುವರ್ಣಸೌಧದ ಪ್ರವೇಶ ದ್ವಾರದಲ್ಲಿ ಸೋಮವಾರ ಮಹನೀಯರ ಭಿತ್ತಿಚಿತ್ರ ಹಿಡಿದು ಪ್ರದರ್ಶನ ನಡೆಸಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ನಾವು ಸರ್ಕಾರಕ್ಕೆ ಆಗ್ರಹಿಸುತ್ತಿರುವುದೇನೆಂದರೆ, ಈ ಸುವರ್ಣಸೌಧದಲ್ಲಿ ದೇಶದ ಮೊದಲ ಪ್ರಧಾನಿ, ಆಧುನಿಕ ಭಾರತದ ನಿರ್ಮಾತೃ ಪಂಡಿತ್ ಜವಹಾರ್ ಲಾಲ್ ನೆಹರೂ, ಶಿಶುನಾಳ ಷರೀಫರು, ವಿಶ್ವಗುರು ಬಸವಣ್ಣ, ನಾರಾಯಣಗುರು, ಕನಕದಾಸರು, ಅಂಬೇಡ್ಕರ್, ಬಾಬು ಜಗಜೀವನ ರಾಮ್, ಸರ್ದಾರ್ ವಲ್ಲಭಬಾಯ್ ಪಟೇಲ್, ಕುವೆಂಪು ಹಾಗೂ ಈ ಭಾಗದ ಪ್ರಮುಖ ವ್ಯಕ್ತಿಗಳ ಭಾವಚಿತ್ರಗಳನ್ನು ಹಾಕಬೇಕು.
ನನಗೆ ಸ್ಪೀಕರ್ ಅವರ ಕಚೇರಿಯಿಂದ ದೂರವಾಣಿ ಕರೆ ಮಾಡಿ ಇಂದು ಬೆಳಗ್ಗೆ 10 ಗಂಟೆಗೆ, ಮಹಾತ್ಮ ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಅನಾವರಣ ಕಾರ್ಯಕ್ರಮವಿದೆ, ನೀವು ಆಗಮಿಸಬೇಕು ಎಂದು ಆಹ್ವಾನಿಸಿದ್ದರು. ನಾವು ಬಹಳ ಸಂತೋಷದಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದೆವು. ಆದರೆ ಇಲ್ಲಿ ಬಂದ ನಂತರ ಮಾಧ್ಯಮಗಳ ಮೂಲಕ ಸಾರ್ವಕರ್ ಫೋಟೋ ಕೂಡ ಹಾಕಲಾಗುತ್ತಿದೆ ಎಂದು ತಿಳಿಯಿತು. ಸಾರ್ವಕರ್ ಅವರಿಗೂ ರಾಜ್ಯಕ್ಕೂ ಯಾವುದೇ ಸಂಬಂಧವಿಲ್ಲ. ಇದು ವಿವಾದಾತ್ಮಕ ವಿಚಾರವಾಗಿದ್ದು, ಈ ಬಗ್ಗೆ ನಾವು ಬೇರೆ ಚರ್ಚೆ ಮಾಡುತ್ತೇವೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಉತ್ತರ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಇಲ್ಲಿ ಜ್ವಲಂತ ಸಮಸ್ಯೆಗಳಿವೆ. ಅನೇಕ ಪ್ರತಿಭಟನೆಗಳು ನಡೆದಿವೆ. ಭ್ರಷ್ಟಾಚಾರ, ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಇವೆಲ್ಲವೂ ಚರ್ಚೆ ಆಗಲಿದೆ ಎಂಬ ಕಾರಣಕ್ಕೆ, ದಾರಿ ತಪ್ಪಿಸಲು ಸರ್ಕಾರ ಈ ಪ್ರಯತ್ನಕ್ಕೆ ಮುಂದಾಗಿದೆ.’
ಬಿಜೆಪಿಯವರು ಅಜೆಂಡಾ ರಚಿಸಿದ್ದಾರೆಯೇ ಎಂಬ ಪ್ರಶ್ನೆಗೆ, ‘ನಾರಾಯಣಗುರು, ಕುವೆಂಪು, ಬಸವಣ್ಣ, ಕನಕದಾಸರು, ವಾಲ್ಮೀಕಿ ಸೇರಿದಂತೆ ನಮಗೆ ಎಲ್ಲರೂ ಬೇಕು. ಸಾಮಾಜಿಕ ನ್ಯಾಯ ಸಿಗಬೇಕು. ದೇಶ, ರಾಜ್ಯದ ಹಿತಕ್ಕೆ ಶ್ರಮಿಸಿ ಅಮರರಾದ ಎಲ್ಲಾ ಧರ್ಮದ ನಾಯಕರು ಬೇಕು ಎಂಬುದು ನಮ್ಮ ಅಜೆಂಡಾ’ ಎಂದು ತಿಳಿಸಿದರು.
ಬಿಜೆಪಿಯವರು ಈ ವಿಚಾರವನ್ನು ಈಗ ಯಾಕೆ ಪ್ರಸ್ತಾಪ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ, ‘ಭ್ರಷ್ಟಾಚಾರ, ಮತದಾರರ ಮಾಹಿತಿ ಕಳುವು, 40% ಕಮಿಷನ್, ಈ ಭಾಗದ ಜನರಿಗೆ ಆಗುತ್ತಿರುವ ಅನ್ಯಾಯ, ದುರಾಡಳಿತದ ಬಗ್ಗೆ ಚರ್ಚೆ ಆಗಬಾರದು ಎಂಬ ಕಾರಣಕ್ಕೆ ಈ ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಸುಳ್ಳಿನ ರಾಜ. ಸಾರ್ವಕರ್ ಫೋಟೋ ಹಾಕಿರುವುದು ನನಗೆ ಗೊತ್ತೇ ಇಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ನೀವು ನಿಮಗೆ ಬೇಕಾದ ಸಮರ್ಥನೆ ಮಾಡಿಕೊಳ್ಳಿ. ಆದರೆ ನನಗೆ ಗೊತ್ತೇ ಇಲ್ಲ ಎಂದು ಸುಳ್ಳು ಹೇಳಿ ಮುಖ್ಯಮಂತ್ರಿ ಸ್ಥಾನಕ್ಕೆ ಧಕ್ಕೆ ತರಬಾರದು’ ಎಂದು ಹೇಳಿದರು.
*ಸುವರ್ಣವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾಂಗ್ರೆಸ್ ಧರಣಿ; ಅಧಿವೇಶನ ಆರಂಭಕ್ಕೂ ಮೊದಲೇ ಸಾವರ್ಕರ್ ಭಾವಚಿತ್ರ ಸಮರ*
https://pragati.taskdun.com/belagavisessionsavarker-photo-issuesiddaramaiahcongressprotest/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ