ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ವಿಧಾನಸಭೆಯಲ್ಲಿ ಆಡಳಿತ ಹಾಗೂ ವಿಪಕ್ಷಗಳ ಸದಸ್ಯರು ಪಕ್ಷಾತೀತವಾಗಿ ಸದನದ ಬಾವಿಗಿಳಿದು ಧರಣಿ ನಡೆಸಿದ ಘಟನೆ ಪ್ರಸಂಗ ನಡೆದಿದೆ.
ಸದನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಸರ್ಕಾರ ಈ ಭಾಗದ ಜನರ ಸಮಸ್ಯೆ ಆಲಿಸುತ್ತಿಲ್ಲ ಎಂದು ಸ್ಬಿಜೆಪಿ ಶಾಸಕ ಎ.ಎಸ್ ನಡಹಳ್ಳಿ ಕಿಡಿಕಾರಿದರು. ನಾನು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕೇಳಿಲ್ಲ. ನಮ್ಮ ಜನರಿಗೆ ಅನ್ನ ನೀಡಿ, ಉತ್ತಮ ಶಿಕ್ಷಣ ನೀಡಿ. ಉತ್ತರ ಕರ್ನಾಟಕಕ್ಕೆ ಅಭಿವೃದ್ಧಿಗಾಗಿ ಸಮಿತಿ ರಚಿಸಿ ಎಂದು ಕೇಳುತ್ತಿದ್ದೇನೆ ಎಂದರು.
ನಾನು, ಯತ್ನಾಳ್ ಕೂಡ ಮಂತ್ರಿಯಾಗಬಹುದಿತ್ತು. ಆದರೆ ಆಗಿಲ್ಲ ಯಾಕೆ? ನಾವು ಉತ್ತರ ಕರ್ನಾಟಕದವರು ಎಂದು ಆಗಿಲ್ಲ ಎಂದು ವ್ಯಂಗ್ಯಬರಿತ ಮಾತಿನಲ್ಲೇ ಸರ್ಕಾರವನ್ನು ತಿವಿದ ಶಾಸಕ ಇತರರ ಜತೆ ನಮ್ಮ ಮಕ್ಕಳು ಕೂಡ ಸ್ಪರ್ಧೆಗೆ ಅವಕಾಶ ನೀಡಿ. ಉತರ ಕರ್ನಾಟಕ ಅಭಿವೃದ್ಧಿಗೆ ಆದ್ಯತೆ ನೀಡಿ ಎಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಉತ್ತರ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ದಷ್ಟೇ ಸರ್ಕಾರದ ಸಾಧನೆ. ಕಲ್ಯಾಣ ಕರ್ನಾಟಕ ಎಂದು ಹೆಸರಿಟ್ಟು ಎರಡುವರೆ ವರ್ಷಗಳಾದರೂ ಅಭಿವೃದ್ಧಿಗಾಗಿ ಒಂದು ಬೋರ್ಡ್ ಕೂಡ ನಿರ್ಮಾಣವಾಗಿಲ್ಲ. ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಉತ್ತರ ಕರ್ನಾಟಕ ಭಾಗದ ಶಾಸಕರೇ ಸದನದಲ್ಲಿ ಗೈರಾಗಿದ್ದಾರೆ. ಸರ್ಕಾರಕ್ಕೆ ಈ ಭಾಗದ ಜನರ ಅಭಿವೃದ್ಧಿ ಆಲೋಚನೆಯೂ ಇದ್ದಂತಿಲ್ಲ ಎಂದು ಟೀಕಿಸಿದರು.
ಇದೇ ವೇಳೆ ಆಡಳಿತ ಹಾಗೂ ವಿಪಕ್ಷ ಶಾಸಕರು ಸದನದ ಬಾವಿಗಿಳಿದು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆಗೆ ಅವಕಾಶ ನೀಡಬೇಕು ಎಂದು ಧರಣಿ ನಡೆಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ